

ನವದೆಹಲಿ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ ಶಶಿಕಲಾ ನಟರಾಜನ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಕೇಸ್ ಇರುವುದರಿಂದ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗುವುದು ಸರಿಎನಿಸುವುದಿಲ್ಲ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ಶಶಿಕಲಾ ಅವರು ಮುಖ್ಯಮಂತ್ರಿಯಾಗಲು ಯಾವುದೇ ನಿರ್ಬಂಧಗಳಿಲ್ಲ, ಆದರೆ ಅವರ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಹಲವು ಪ್ರಕರಣಗಳಿವೆ, ಇವೆಲ್ಲಾ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ್ದಾಗಿವೆ ಎಂದು ಅವರು ಹೇಳಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಅವರು ಉಪ ಚುನಾವಣೆಗೆ ಸ್ಪರ್ಧಿಸುವ ಮುನ್ನ ಸುಪ್ರೀಂ ಕೋರ್ಟ್ನಲ್ಲಿರುವ ಕೇಸುಗಳ ತೀರ್ಪು ಬರಬೇಕು. ಹೀಗಾಗಿ ಶಶಿಕಲಾ ಅವರು ಸಿಎಂ ಎಂದು ಘೋಷಿಸಿಕೊಳ್ಳುವ ಮೊದಲು ಬುದ್ಧಿವಂತಿಕೆಯಿಂದ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದ್ದಾರೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿರುವ ಶಶಿಕಲಾ ಅವರು ಪ್ರಬಲ ಮಹಿಳೆಯಾಗಿದ್ದಾರೆ. ಇಂದು ಶಶಿಕಲಾ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ ಎಂಬ ಸುದ್ದಿಯನ್ನು ಪಕ್ಷದ ಹಿರಿಯ ನಾಯಕರು ನಿರಾಕರಿಸಿದ್ದಾರೆ.