
ಚೆನ್ನೈ: ಶಶಿಕಲಾ ತಮಿಳುನಾಡಿನ ಮುಖ್ಯಮಂತ್ರಿ ಗಾದಿಗೇರಲು ಸಿದ್ಧತೆ ನಡೆಸಿರುವಂತೆಯೇ ಅತ್ತ ಜಯಲಲಿತಾ ಸೊಸೆ ದೀಪಾ ಜಯಕುಮಾರ್ ಶಶಿಕಲಾ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ.
ಮಂಗಳವಾರ ಎಐಎಡಿಎಂಕೆ ಮುಖಂಡ ಪಾಂಡಿರಾಜನ್ ಜಯಾ ಸಾವಿಗೆ ಸಂಬಂಧಿಸಿದಂತೆ ಸ್ಫೋಟಕ ಆರೋಪ ಮಾಡಿದ ಬೆನ್ನಲ್ಲೇ ಚೆನ್ನೈ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಯಲಲಿತಾ ಅವರ ಸಹೋದರನ ಮಗಳಾದ ದೀಪಾ ಜಯಕುಮಾರ್ ಅವರು, "ಶಶಿಕಲಾ ಮುಖ್ಯಮಂತ್ರಿಯಾಗುತ್ತಿರುವುದು ಈ ರಾಜ್ಯದ ಕೆಟ್ಟದಿನವಾಗಿದೆ. ಚುನಾಯಿತ ನಾಯಕರಷ್ಟೇ ಮುಖ್ಯಮಂತ್ರಿಯಾಗಬೇಕು. ಶಶಿಕಲಾ ಜನರಿಂದ ಚುನಾಯಿತರಾಗಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಶಶಿಕಲಾ ಚುನಾಯಿತ ನಾಯಕಿಯಲ್ಲ, ಸಿಎಂ ಸ್ಥಾನಕ್ಕೆ ಅವರು ಅರ್ಹರಲ್ಲ ಎಂದು ಅವರು ಹೇಳಿದ್ದಾರೆ.
ಸಿಎಂ ಆಗೋಕೆ 33 ವರ್ಷದ ಸ್ನೇಹವೇ ಮಾನದಂಡವಲ್ಲ. ಸಿಎಂ ಪದವಿ ಕುರಿತು ಜನಾದೇಶವೇ ಅಂತಿಮ ಮಾನದಂಡವಾಗಿರುತ್ತದೆ. ಆದರೆ ಶಶಿಕಲಾ ಯಾವುದೇ ಚುನಾವಣೆಯಲ್ಲೂ ಗೆದ್ದವರಲ್ಲ. ಇದು ತಮಿಳುನಾಡು ಜನತೆಗೆ ಕೆಟ್ಟಕಾಲವಾಗಿದ್ದು, ತಮ್ಮ ಭವಿಷ್ಯದ ಕುರಿತು ಜನ ಚಿಂತಿಸುವಂತಾಗಿದೆ. ಶಶಿಕಲಾ ಅವರಿದೆ ಜನ ಭಯ ಪಡಬಹುದು. ಆದರೆ ನಾನಲ್ಲ. ಶಶಿಕಲಾ ಅವರ ಯಾವುದೇ ಬೆದರಿಕೆಗೂ ನಾನು ಜಗ್ಗುವುದಿಲ್ಲ. ನಾನು ನಾಯಕಿಯಾಗಬೇಕು ಎಂದರೆ ನನ್ನನ್ನು ಜನ ಚುನಾವಣೆಯಲ್ಲಿ ಗೆಲ್ಲಿಸಿದರೇ ಮಾತ್ರ ನಾನು ನಾಯಕಿಯಾಗಲು ಸಾಧ್ಯ. ಜಯಾ ಅವರ ಆಸ್ತಿಗಾಗಿ ನಾನು ಇಲ್ಲಿ ನಿಂತಿಲ್ಲ. ನನ್ನ ಅತ್ತೆಗೋಸ್ಕರ ಮತ್ತು ಅಪೂರ್ಣಗೊಂಡಿರುವ ಅವರ ಕೆಲಸವನ್ನು ಪೂರ್ಣಗೊಳಿಸಬೇಕಿದೆ. ಹೀಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಅವರು ಹೇಳಿದರು.
ಇದೇ ವೇಳೆ ಜಯಾ ಅನಾರೋಗ್ಯದ ಸಂದರ್ಭದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೀಪಾ ಜಯಕುಮಾರ್ ಅವರು, "ಜಯಾರನ್ನು ಆನಾರೋಗ್ಯದ ಕಾರಣವೊಡ್ಡಿ ಆಸ್ಪತ್ರೆಗೆ ದಾಖಲು ಮಾಡಿದ ಮೊದಲ ದಿನದಿಂದಲೇ ನಾನು ಆಸ್ಪತ್ರೆಗೆ ಭೇಟಿ ನೀಡಿದ್ದೆ. ಆದರೆ ನನ್ನನ್ನು ಆಸ್ಪತ್ರೆಯೊಳಗೆ ಬಿಟ್ಟಿರಲಿಲ್ಲ. ಶಶಿಕಲಾ ನನ್ನ ಆಸ್ಪತ್ರೆ ಭೇಟಿಯನ್ನು ಬೇಕೆಂದೇ ತಡೆದಿದ್ದರು ಎಂದು ಆರೋಪಿಸಿದರು.
ವೈದ್ಯರ ಸುದ್ದಿಗೋಷ್ಠಿ ಪೂರ್ವ ನಿಯೋಜಿತ ಮತ್ತು ಪಕ್ಷಪಾತದ್ದು
ಇದೇ ವೇಳೆ ಜಯಾ ಸಾವಿನ ಕುರಿತಂತೆ ಅಪೋಲೋ ಆಸ್ಪತ್ರೆ ವೈದ್ಯರು ಕರೆದಿದ್ದ ಸುದ್ದಿಗೋಷ್ಠಿಯನ್ನು ಪೂರ್ವ ನಿಯೋಜಿತ ಮತ್ತು ಪಕ್ಷಪಾತದ್ದು ಎಂದು ದೀಪಾ ಜಯಕುಮಾರ್ ಹೇಳಿದ್ದಾರೆ.
Advertisement