ತ.ನಾಡಿನಲ್ಲಿ ತಾರಕ್ಕೇರಿದ ರಾಜಕೀಯ ಬಿಕ್ಕಟ್ಟು: ರಾಜ್ಯಪಾಲರನ್ನು ಭೇಟಿಯಾಗಲಿರುವ ಶಶಿಕಲಾ

ತಮಿಳುನಾಡು ರಾಜಕೀಯ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈ ರಾಜಕೀಯ ಬಿಕ್ಕಟ್ಟು ಗುರುವಾರ ನಿರ್ಣಾಯಕ ದಿನವಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರತೊಡಗಿವೆ...
ಚೆನ್ನೈನಲ್ಲಿರುವ ತಮ್ಮ ನಿವಾಸದೆದುರು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ಒ. ಪನ್ನೀರ್ ಸೆಲ್ವಂ
ಚೆನ್ನೈನಲ್ಲಿರುವ ತಮ್ಮ ನಿವಾಸದೆದುರು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ಒ. ಪನ್ನೀರ್ ಸೆಲ್ವಂ

ಚೆನ್ನೈ: ತಮಿಳುನಾಡು ರಾಜಕೀಯ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈ ರಾಜಕೀಯ ಬಿಕ್ಕಟ್ಟು ಗುರುವಾರ ನಿರ್ಣಾಯಕ ದಿನವಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರತೊಡಗಿವೆ.

ಅಣ್ಣಾ ಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಾಲ ಅವರ ವಿರುದ್ಧ ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರು ಇದ್ದಕ್ಕಿದ್ದಂತೆ ಬಂಡಾವೆದ್ದಿದ್ದು, ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ಅವರ ನಡುವಿನ ಈ ಜಟಾಪಟಿ ತಮಿಳುನಾಡು ರಾಜಕೀಯದಲ್ಲಿ ಅತಂತ್ರವನ್ನು ಸೃಷ್ಟಿಮಾಡಿದೆ.

ತಮಿಳುನಾಡು ರಾಜಕೀಯದಲ್ಲಿ ಅತಂತ್ರ ಸೃಷ್ಟಿಯಾಗಿರುವ ಹಿನ್ನಲೆಯಲ್ಲಿ ಇಂದು ರಾಜ್ಯಪಾಲ ಸಿ. ವಿದ್ಯಾಸಗರ ರಾವ್ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ರಾಜಕೀಯ ಬಿಕ್ಕಟ್ಟು ಪರಿಹಾರಗೊಳ್ಳುವುದು ಬಹುತೇಕ ಖಚಿತವಾಗಲಿದೆ ಎಂಬ ಮಾತುಗಳು ಕೇಳಿ ಬರತೊಡಗಿವೆ.

ವಿದ್ಯಾಸಾಗರ್ ರಾವ್ ಅವರು ತಮಿಳುನಾಡಿಗೆ ಭೇಟಿ ನೀಡುತ್ತಿದ್ದಂತೆಯೇ ವಿ.ಕೆ. ಶಶಿಕಲಾ ಅವರು ರಾಜ್ಯಪಾಲರನ್ನು ಭೇಟಿಯಾಗಲು ತೀರ್ಮಾನಿಸಿದ್ದು, ರಾಜಕೀಯ ಬಿಕ್ಕಟ್ಟು ಕುರಿತಂತೆ ಮಾತುಕತೆ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ.

ದಿಢೀರನೇ ಶಶಿಕಲಾ ವಿರುದ್ಧ ಬಂಡಾಯವೆದ್ದಿದ್ದ ಪನ್ನೀರ್ ಸೆಲ್ವಂ ಅವರು ಶಶಿಕಲಾ ಅವರನ್ನು ಬದಿಗೆ ಸರಿಸಿ ತಮ್ಮ ಅಧಿಪತ್ಯ ಸ್ಥಾಪಿಸಲು ಯತ್ನ ನಡೆಸಿದ್ದರು. ಈಗಲೂ ನಾನೇ ಮುಖ್ಯಮಂತ್ರಿ. ರಾಜ್ಯದ ಜನತೆ ಹಾಗೂ ಕಾರ್ಯಕರ್ತರು ಒಪ್ಪಿದ್ದೇ ಆದರೆ, ರಾಜೀನಾಮೆ ಹಿಂಪಡೆಯಲು ಸಿದ್ಧ ಎಂದು ನಿನ್ನೆಯಷ್ಟೇ ಪನ್ನೀರ್ ಸೆಲ್ವಂ ಅವರು ಹೇಳಿದ್ದರು. ಅಲ್ಲದೆ, ಶಶಿಕಲಾ ವಿರುದ್ಧದ ಬಂಡಾಯವನ್ನು ತೀವ್ರಗೊಳಿಸುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಗೂಢ ಸಾವಿನ ತನಿಖೆಗೆ ಸುಪ್ರೀಂಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದ ಆಯೋಗವನ್ನು ರಚಿಸುವೆ ಎಂದು ಹೇಳಿದ್ದರು.

ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಹಿಂಪಡೆದು ವಿಶ್ವಾಸ ಬಹುಮತ ಸಾಬೀತು ಪಡಿಸುವೆ ಎಂದು ಹೇಳಿದ್ದರು.

ಇನ್ನು ಮುಖ್ಯಮಂತ್ರಿ ಸ್ಥಾನಕ್ಕೇರಲು ತುದಿಗಾಲಲ್ಲಿ ನಿಂತಿದ್ದ ಶಶಿಕಲಾ ಅವರು ನಿನ್ನೆ ಶಾಸಕರ ಸಭೆ ನಡೆಸಿದ್ದರು. ಈ ಸಭೆಯಲ್ಲಿ 130 ಶಾಸಕರು ಪಾಲ್ಗೊಂಡಿದ್ದು, ಸಭೆಯ ಬಳಿಕ ಶಾಸಕರನ್ನು ರಹಸ್ಯ ಸ್ಥಳಕ್ಕೆ ರವಾನಿಸಿದ್ದ ಶಶಿಕಲಾ ಮಾತುಕತೆ ನಡೆಸಿದ್ದರು ಎಂದು ಹೇಳಲಾಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com