
ಬಿಜ್ನೋರ್: ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲು ಸಣ್ಣ ರೈತರ ಬೆಳೆ ಸಾಲವನ್ನು ಮನ್ನಾ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಬಿಜ್ನೋರ್ ನಲ್ಲಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಸರ್ಕಾರದ ದುರಾಡಳಿತದಿಂದ ಜನ ತತ್ತರಿಸುತ್ತಿದ್ದಾರೆ. ಒಂದೆಡೆ ರೈತರು ಬೆಳೆ ನಷ್ಟದಿಂದ ಸಂಕಷ್ಟ ಅನುಭವಿಸುತ್ತಿದ್ದರೆ, ಸಾಲ ತೀರಿಸಲಾಗದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಜನ ಬಿಜೆಪಿಯನ್ನು ಆಶೀರ್ವದಿಸಿ ಅಧಿಕಾರಕ್ಕೆ ತಂದರೆ ತಮ್ಮ ಸರ್ಕಾರದ ಮೊದಲ ಕೆಲಸವೇ ಸಣ್ಣ ರೈತರ ಬೆಳೆ ಸಾಲ ಮನ್ನ ಮಾಡುವುದು. ಅಂತೆಯೇ ರಸಗೊಬ್ಬರದ ಬೆಲೆಯನ್ನು ಕೂಡ ಕಡಿಮೆಗೊಳಿಸುವದಾಗಿ ಮೋದಿ ಆಶ್ವಾಸನೆ ನೀಡಿದರು.
ಇದೇ ವೇಳೆ ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್ ಅವರ ಹೆಸರು ಪ್ರಸ್ತಾಪಿಸಿದ ಮೋದಿ, ಚರಣ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಗೊಬ್ಬರ ಬೆಲೆ ಕಡಿಮೆಯಾಗಿತ್ತು. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅದೇ ತೆರನಾದ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್ ಮತ್ತು ಎಸ್ ಪಿ ಮೈತ್ರೀ ಕೂಟದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಒಬ್ಬರು ಭಾರತವನ್ನು ಹಾಳು ಮಾಡಿದರು ಮತ್ತೊಬ್ಬರು ಉತ್ತರ ಪ್ರದೇಶವನ್ನು ಹಾಳು ಮಾಡಿದ್ದಾರೆ. ಇದೀಗ ಇಬ್ಬರೂ ಜೊತೆಯಾಗಿದ್ದು, ಮತದಾರರು ಈ ದುಷ್ಟ ಮೈತ್ರಿಕೂಟವನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಉತ್ತರ ಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಮಾತನಾಡಿದ ಮೋದಿ, ಉತ್ತರ ಪ್ರದೇಶದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಅಪರಾಧ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಜ್ಯದಲ್ಲಿ ಸರ್ಕಾರವಿತ್ತೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ರಾಜ್ಯದಲ್ಲಿನ ಗೂಂಡಾ ಸರ್ಕಾರದಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಈ ಗೂಂಡಾ ಸರ್ಕಾರವನ್ನು ಜನ ತಿರಸ್ಕರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ಇದೇ ವೇಳೆ ಗುರು ರವಿದಾಸ್ ಅವರನ್ನು ನೆನೆದ ಮೋದಿ, ನಮ್ಮ ಸರ್ಕಾರ ಗುರು ರವಿದಾಸ್ ಅವರ ಸಿದ್ಧಾಂತಗಳನ್ನು ಅನುಕರಿಸುತ್ತಿದೆ. ನಾವು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಮಂತ್ರದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.
Advertisement