ಪಂಚರಾಜ್ಯ ಚುನಾವಣೆ ಕದನ: ಉತ್ತರಪ್ರದೇಶ, ಉತ್ತರಾಖಂಡ್'ನಲ್ಲಿ ಮತದಾನ ಪ್ರಕ್ರಿಯೆ ಆರಂಭ

ದೇಶದಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಪೈಕಿ ಬುಧವಾರ ಉತ್ತರಪ್ರದೇಶದಲ್ಲಿ 2ನೇ ಹಂತದ ಹಾಗೂ ಉತ್ತರಾಖಂಡ್'ನಲ್ಲಿ ಮೊದಲನೇ ಹಂತದ ಮತದಾನ ಪ್ರಕ್ರಿಯೆಗಳು ಆರಂಭವಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಪೈಕಿ ಬುಧವಾರ ಉತ್ತರಪ್ರದೇಶದಲ್ಲಿ 2ನೇ ಹಂತದ ಹಾಗೂ ಉತ್ತರಾಖಂಡ್'ನಲ್ಲಿ ಮೊದಲನೇ ಹಂತದ ಮತದಾನ ಪ್ರಕ್ರಿಯೆಗಳು ಆರಂಭವಾಗಿದೆ.

ಚುನಾವಣೆ ಹಿನ್ನಲೆಯಲ್ಲಿ ಈಗಾಗಲೇ ಎರಡೂ ರಾಜ್ಯಗಳ ಮತಗಟ್ಟೆಯಲ್ಲಿ ಬಿಗಿ ಭದ್ರತೆಯನ್ನು ನೀಡಲಾಗಿದೆ. ಉತ್ತರಪ್ರದೇಶದಲ್ಲಿ ಒಟ್ಟು ಏಳು ಹಂತದಲ್ಲಿ ಮತದಾನ ನಡೆಯಲಿದ್ದು ಈಗಾಗಲೇ ಒಂದನೇ ಹಂತದ ಮತದಾನ ಮುಗಿದೆ. ಇಂದು 2ನೇ ಹಂತದಲ್ಲಿ 67 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆಗಳು ಆರಂಭವಾಗಿದ್ದು, ಸಂಜೆ 5 ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದೆ.

67 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 720 ಅಭ್ಯರ್ಥಿಗಳು ಕಣದಲ್ಲಿದ್ದು, 2.28 ಕೋಟಿ ಜನರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಸ್ಪರ್ಧಿಸಿರುವ ರಾಮ್ಪುರ ಕ್ಷೇತ್ರ ಹಾಗೂ ಇವರ ಪುತ್ರ ಅಬ್ದುಲ್ ಅಜಂರ ಸ್ವರ್ ಕ್ಷೇತ್ರ ಸೇರಿದಂತೆ ಹಲವರು ಚುನಾವಣೆ ಕಣದಲ್ಲಿದ್ದಾರೆ.

ಇನ್ನು ಉತ್ತರಾಖಂಡ್ ರಾಜ್ಯದಲ್ಲಿ 69 ವಿಧಾಸಭಾ ಕ್ಷೇತ್ರಗಳಿಗೆ ಇಂದಿನಿಂದ ಮತದಾನ ನಡೆಯುತ್ತಿದ್ದು, 69 ಕ್ಷೇತ್ರಗಳಲ್ಲಿ 628 ಮಂದಿ ಅಭ್ಯರ್ಥಿಗಳು ಕಣದಲ್ಲಿ ನಿಂತಿದ್ದಾರೆ. 75,13,547 ಮಂದಿ ಮತದಾರರು ಮತದಾನ ಮಾಡಲಿದ್ದಾರೆ. ಶಾಂತಿಯುತ ಮತದಾನಕ್ಕಾಗಿ ಬಿಗಿ ಭದ್ರತೆಯನ್ನು ನೀಡಲಾಗಿದ್ದು, ರಾಜ್ಯದಲ್ಲಿ ಈಗಾಗಲೇ 10,685 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com