

ನವದೆಹಲಿ: ಸೇನಾ ಕಾರ್ಯಾಚರಣೆಗೆ ಅಡ್ಡಿಪಡಿಸುವವರನ್ನು ಭಯೋತ್ಪಾದಕರ ಕಾರ್ಯಕರ್ತರೆಂದು ಪರಿಗಣಿಸಲಾಗುತ್ತದೆ ಎಂಬ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಹೇಳಿಕೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಬಿಪಿನ್ ರಾವತ್ ಅವರ ಬೆಂಬಲಕ್ಕೆ ಶುಕ್ರವಾರ ಬಿಜೆಪಿ ಬಂದಿದೆ.
ಬಿಪಿನ್ ರಾವತ್ ಅವರ ಹೇಳಿಕೆ ಸಾರ್ವಜನಿಕರ ಕುರಿತು ಕಾಳಜಿಯ ಮಾತುಗಳಾಗಿತ್ತೇ ವಿನಃ, ಅವರು ಯಾರಿಗೂ ಬೆದರಿಕೆಯನ್ನು ಹಾಕಿಲ್ಲ ಎಂದು ಬಿಜೆಪಿ ಶುಕ್ರವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಕಾಂಗ್ರೆಸ್ ಆಗಲೀ ಅಥವಾ ಇನ್ನಾವುದೇ ರಾಜಕೀಯ ಪಕ್ಷಗಳಾಗಲಿ ಯಾವುದೇ ಕಾರಣಕ್ಕೂ ಭಾರತೀಯ ಸೇನೆಯನ್ನು ರಾಜಕೀಯ ವಿಚಾರಗಳಲ್ಲಿ ಮಧ್ಯೆ ತರಬಾರದು ಎಂದು ಹೇಳಿದ್ದಾರೆ.
ಸೇನಾ ಮುಖ್ಯಸ್ಥ ಹೇಳಿಕೆ ಅತೀ ಸೂಕ್ಷ್ಮವಾಗಿದ್ದು, ಅವರ ಹೇಳಿಕೆಯನ್ನು ಕಾಳಜಿ ಹಾಗೂ ಎಚ್ಚರಿಕೆ ಎಂಬಂತೆ ತೆಗೆದುಕೊಳ್ಳಬೇಕೇ ವಿನಃ ಬೆದರಿಕೆ ಎಂದು ಪರಿಗಣಿಸಬಾರದು. ಸೇನಾ ಪಡೆಯ ನೈತಿಕತೆಯ ಮೇಲೆ ಪರಿಣಾಮ ಬೀರುವ ಪ್ರಯತ್ನಗಳನ್ನು ರಾಜಕೀಯ ಪಕ್ಷಗಳು ಮಾಡಬಾರದು ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಕಾರ್ಯಾಚರಣೆ ವೇಳೆ ಸ್ಥಳೀಯರು ವಿರೋಧ ವ್ಯಕ್ತಪಡಿಸುವುದರಿಂದ ಭದ್ರತಾ ಸಿಬ್ಬಂದಿಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸ್ಥಳೀಯರು ಭಯೋತ್ಪಾದಕರಿಗೆ ತಪ್ಪಿಸಿಕೊಳ್ಳಲು ನೆರವು ಮಾಡಿಕೊಡುವಂತಹ ಘಟನೆಗಳೂ ನಡೆಯುತ್ತಿವೆ. ಸ್ಥಳೀಯ ಯುವಕರು ಪಾಕಿಸ್ತಾನ, ಐಎಸ್ಐಎಸ್ ಧ್ವಜಗಳನ್ನು ಹಿಡಿದು ಸೇನಾ ಕಾರ್ಯಾಚರಣೆಗೆ ಅಡ್ಡಿ ಪಡಿಸಿದರೆ ಮುಲಾಜಿಲ್ಲದೇ ಅವರನ್ನು ರಾಷ್ಟ್ರದ್ರೋಹಿ, ಭಯೋತ್ಪಾದಕರ ಕಾರ್ಯಕರ್ತರೆಂದು ಪರಿಗಣಿಸಲಾಗುತ್ತದೆ ಎಂದು ಕಠಿಣ ಸಂದೇಶವನ್ನು ರವಾನಿಸಿದ್ದರು.
ಈ ಹೇಳಿಕೆ ವಿರೋಧ ಪಕ್ಷಗಳು ಸಾಕಷ್ಟು ಟೀಕೆಗಳನ್ನು ವ್ಯಕ್ತಪಡಿಸಿದ್ದವು. ಅಲ್ಲದೆ, ಕಾಶ್ಮೀರ ಪ್ರತ್ಯೇಕತಾವಾದಿಗಳು ಕೂಡ ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ಮುಖ್ಯಸ್ಥ ಯಾಸಿನ್ ಮಲಿಕ್ ಮಾತನಾಡಿ, ಸೇನಾ ಮುಖ್ಯಸ್ಥ ಹೇಳಿಕೆ ರಾಜಕೀಯ ಅಪ್ರಬುದ್ಧತೆಯನ್ನು ತೋರಿಸುತ್ತದೆ. ಈ ರೀತಿಯ ಹೇಳಿಕೆ ಇಡೀ ಕಾಶ್ಮೀರಕ್ಕೆ ನೇರ ಬೆದರಿಕೆಯಾಗಿದೆ ಎಂದು ಹೇಳಿದ್ದರು.