ಮುಂಬೈ: ಮುಂಬೈ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಪಂಚದ ಅತಿ ಹೆಚ್ಚು ತೂಕವಿರುವ ಮಹಿಳೆ ಕಳೆದ 5 ದಿನಗಳಲ್ಲಿ ಬರೊಬ್ಬರಿ 30 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ.
ಹೈಪೋಥೈರಾಯ್ಡ್, ಮಧುಮೇಹ, ಹೈಪರ್ ಟೆನ್ಷನ್, ಕಿಡ್ನಿ ಸಮಸ್ಯೆಗಳಿಗೆ ಎಮಾನ್ ಅಹ್ಮದ್ ಅಬ್ದ್ ಅಲ್ ಅಟಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಕೈ-ಕಾಲುಗಳನ್ನು ಸ್ವಲ್ಪ ಮಟ್ಟಿಗೆ ಚಲನೆ ಮಾಡಲು ಸಾಧ್ಯವಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೊದಲ ಶಸ್ತ್ರಚಿಕಿತ್ಸೆ ಕೆಲವೇ ವಾರಗಳಲ್ಲಿ ನಡೆಯಲಿದೆ. ಆಪರೇಷನ್ ಟೇಬಲ್ 450 ಕೆಜಿ ತೂಕವನ್ನು ಹೊರುವ ಸಾಮರ್ಥ್ಯ ಹೊಂದಿದೆ. ಕೇವಲ 141 ಸೆಂಟಿಮೀಟರ್ ಅಗಲ ಮಾತ್ರ ಇದೆ. ಆದರೆ ಚಿಕಿತ್ಸೆ ಪಡೆಯುತ್ತಿರುವ ಎಮಾನ್ ಅಹ್ಮದ್ ಅಬ್ದ್ ಅಲ್ ಅಟಿ 151 ಸೆಂಟಿ ಮೀಟರ್ ಅಗಲವಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ತೂಕ ಕಡಿಮೆ ಮಾಡಲು ಆಕೆ ಕಟ್ಟುನಿಟ್ಟಿನ ಆಹಾರ ಕ್ರಮ ಅನುಸರಿಸುತ್ತಿದ್ದು, ಈ ವರ್ಷ ಆಕೆಯ ತೂಕವನ್ನು 200 ಕೆಜಿಗೆ ಇಳಿಕೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.