
ತಿರುಪತಿ: ನೋಟು ನಿಷೇಧದ ಬಿಸಿ ಕೇವಲ ಸಾಮಾನ್ಯ ನಾಗರೀಕನ ಮೇಲೆ ಮಾತ್ರ ಅಲ್ಲ.. ಬದಲಿಗೆ ವಿಶ್ವದ ಶ್ರೀಮಂತ ದೇವರು ಎಂಬ ಕೀರ್ತಿಗೆ ಭಾಜನವಾಗಿರುವ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೂ ತಟ್ಟಿದೆ.
ಹೌದು...ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರು. ಮುಖೆಬೆಲೆಯ ನೋಟುಗಳನ್ನು ನಿಷೇಧ ಮಾಡಿದ ಬಳಿಕ ತಿರುಪತಿ ತಿರುಮಲ ದೇವಾಲಯಗಳ ಆದಾಯದಲ್ಲಿ ಕುಸಿತ ಕಂಡುಬಂದಿದೆ. ಪ್ರತಿನಿತ್ಯ ಆದಾಯದಲ್ಲಿ ಸುಮಾರು 1.5ರಿಂದ 2 ಕೋಟಿ ರು.ಗಳ ವರೆಗೂ ಆದಾಯ ಕುಸಿದಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
ಇದೇ ಕಾರಣಕ್ಕಾಗಿ ಆದಾಯ ಏರಿಕೆ ನಿಟ್ಟಿನಲ್ಲಿ ಟಿಟಿಡಿ ಕೆಲ ನಿರ್ಧಾರಗಳನ್ನು ಕೊಳ್ಳಲು ಚಿಂತನೆ ನಡೆಸಿದ್ದು, ಅದರಂತೆ ದೇವಾಲಯದ ಪ್ರಮುಖ ಸೇವೆಗಳ ಮೇಲಿನ ದರಗಳನ್ನು ಏರಿಕೆ ಮಾಡಲು ಟಿಟಿಡಿ ಮುಂದಾಗಿದೆ. ಲಡ್ಡು, ದರ್ಶನದ ಟಿಕೆಟ್ ಗಳು, ಅರ್ಜಿತ ಸೇವೆ ಸೇವೆ ಸೇರಿದಂತೆ ವಿವಿಧ ಬಗೆಯ ಸೇವೆಗಳ ಮೇಲಿನ ದರಗಳನ್ನು ಏರಿಕೆ ಮಾಡಲು ಟಿಟಿಡಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಅಂತೆಯೇ ತನ್ನ ದರ ಏರಿಕೆ ನಿರ್ಧಾರದಿಂದ ಭಕ್ತರಿಗೂ ಹೊರೆಯಾಗದಂತೆ ನಿರ್ಧಾರ ಕೈಗೊಳ್ಳಲು ಸಲಹೆಗಳು ಬಂದಿದ್ದು, ಇದೇ ಕಾರಣಕ್ಕೆ ಭಕ್ತರಿಗೆ ಹೆಚ್ಚಿನ ಹೊರೆಯಾಗದಂತೆ ಈ ಹಣವನ್ನು ತುಂಬಿಕೊಳ್ಳುವ ದಾರಿಗಳನ್ನು ಆಡಳಿತ ಮಂಡಳಿ ಸಿಬ್ಬಂದಿಗಳು ಪರಿಶೀಲಿಸುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಟಿಟಿಡಿ ಅಧ್ಯಕ್ಷ ಸಿ. ಕೃಷ್ಣಮೂರ್ತಿ ಅವರು, ಭಕ್ತರಿಗೆ ಹೊರೆಯಾಗದಂತೆ ವಿವಿಧ ಸೇವೆಗಳ ದರ ಏರಿಕೆಗೆ ನಿರ್ಧರಿಸಲಾಗಿದೆ. ಟಿಟಿಡಿ ದರ್ಶನ ಟಿಕೆಟ್ ದರ 50 ರೂ.ನಿಂದ 5000 ರುಪಾಯಿವರೆಗೆ ಇದೆ. ಬಹುತೇಕ ಭಕ್ತರು 300 ರೂ. ಟಿಕೆಟ್ ಖರೀದಿಸುತ್ತಾರೆ. ಕನಿಷ್ಠ 2000 ಭಕ್ತರು ಪ್ರತಿದಿನ ವಿಐಪಿ ಟಿಕೆಟ್ ಮೂಲಕ ದರ್ಶನ ಪಡೆಯುತ್ತಾರೆ. ವಿವಿಧ ಸೇವೆಗಳ ಟಿಕೆಟ್ ದರವನ್ನು 5ರಿಂದ 10 ರು. ಏರಿಸಿ ಆದಾಯದ ಹೆಚ್ಚಿಸಬಹುದು ಎಂಬುದು ಅಧಿಕಾರಿಗಳ ಅಭಿಪ್ರಾಯ ಎಂದು ಹೇಳಿದ್ದಾರೆ.
ಸರ್ಕಾರದ ಒಪ್ಪಿಗೆ ದೊರೆತರ ಮಾತ್ರ ದರ ಏರಿಕೆ
ಇನ್ನು ಟಿಟಿಡಿ ನಿರ್ಧಾರಕ್ಕೆ ಅಂಧ್ರ ಪ್ರದೇಶ ಸರ್ಕಾರ ಅನುಮೋದನೆ ನೀಡಿದರೆ ಮಾತ್ರ ಅದು ಜಾರಿಯಾಗುತ್ತದೆ. ಹೀಗಾಗಿ ಟಿಟಿಡಿ ತನ್ನ ದರ ಏರಿಕೆ ಜಾರಿಗೂ ಮೊದಲು ಆಂಧ್ರ ಪ್ರದೇಶ ಸರ್ಕಾರವನ್ನು ಸಂಪರ್ಕಿಸಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಂದ ಅನುಮೋದನೆ ಪಡೆಯಬೇಕಿದೆ. ಈ ಹಿಂದೆ ಟಿಟಿಡಿ ಮುಂದಿಟ್ಟಿದ್ದ ಟಿಕೆಟ್ ಮತ್ತು ಪ್ರಸಾದ ದರ ಏರಿಕೆ ಪ್ರಸ್ತಾಪವನ್ನು ಆಂಧ್ರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತಳ್ಳಿಹಾಕಿದ್ದರು.
Advertisement