

ಇಟವಾ: ಸಮಾಜವಾದಿ ಪಕ್ಷದ ಕೌಟುಂಬಿಕ ಕಲಹ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ, ಇದೇ ವೇಳೆ ಕುಟುಂಬದ ಒಳಜಗಳದ ಬಗ್ಗೆ ಮುಲಾಯಂ ಸಿಂಗ್ ಯಾದವೇ 2ನೇ ಪತ್ನಿ ಸಾಧ್ನಾ ಪ್ರತಿಕ್ರಿಯೆ ನೀಡಿದ್ದಾರೆ.
ಉತ್ತರ ಪ್ರದೇಶದ ಮೊದಲ ಕುಟುಂಬದಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯಗಳಿಲ್ಲ, ನಾನು ಅಖಿಲೇಶ್ ತಾಯಿ, ಆತ ನನ್ನ ಮಗ ಎಂದು ಹೇಳಿದ್ದಾರೆ.
ಜಸ್ವಂತ್ ನಗರ ವಿಧಾನ ಸಭೆ ಕ್ಷೇತ್ರದಲ್ಲಿ ಮತ ಚಲಾಯಿಸಿದ ನಂತರ ಮಾತನಾಡಿದ ಅವರು, ಯಾದವ್ ಕುಟುಂಬದಲ್ಲಿ ಕಲಹ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ, ಮಲತಾಯಿ ಎಂಬ ಶಬ್ದ ಬಳಕೆ ಮಾಡುವುದು ಸರಿಯಲ್ಲ, ಇದರ ಹಿಂದೆ ಯಾರಿದ್ದಾರೆ ಎಂಬುದು ನನಗೆ ತಿಳಿಯದು, ಆದರೆ ಇದನ್ನೆಲ್ಲಾ ಮಾಡುತ್ತಿರುವವರು ಕೆಟ್ಟ ಜನಗಳು ಎಂದು ಹರಿಹಾಯ್ದಿದ್ದಾರೆ.
ಮುಲಾಯಂ ಸೊಸೆ ಅಪರ್ಣಾ ಯಾದವ್ ಕೂಡ ಈ ವೇಳೆ ಜೊತೆಗಿದ್ದರು. ಲಕ್ನೋದ ಕಾಂಟ್ ವಿಧಾನ ಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಅಪರ್ಣಾ ಯಾದವ್ ಪರ ಅಖಿಲೇಶ್ ಪತ್ನಿ ಡಿಂಪಲ್ ಯಾದವ್ ಚುನಾವಣಾ ಪ್ರಚಾರ ನಡೆಸಿದ್ದರು.
ಮುಲಾಯಂ 2ನೇ ಪುತ್ರ ಪ್ರತೀಕ್ ಯಾದವ್ ಪತ್ನಿ ಅಪರ್ಣಾ ಯಾದವ್ ಬಿಜೆಪಿಯ ರೀಟಾ ಬಹುಗುಣ ಜೋಶಿ ವಿರುದ್ಧ ಸ್ಪರ್ದಿಸಿದ್ದಾರೆ.
ಅಖಿಲೇಶ್ ಯಾದವ್ ಮತ್ತು ಪ್ರತೀಕ್ ಯಾದವ್ ಇಬ್ಬರು ನನ್ನ ಎರಡು ಕಣ್ಣುಗಳಿದ್ದಂತೆ, ಒಂದು ಕಣ್ಣಿಗೆ ನೋವಾದರೇ ಯಾವ ರೀತಿಯ ಅನುಭವವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.