
ಹೈದರಾಬಾದ್: ಹೈದರಾಬಾದ್ ನಲ್ಲಿರುವ ಎಸಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಿಂದಾಗಿ ಆರು ಮಂದಿ ಸಜೀವ ದಹನವಾಗಿರುವ ಘಟನೆ ಬುಧವಾರ ನಡೆದಿದೆ.
ಹೈದರಾಬಾದ್ ನ ಅತ್ತಾಪುರ ರಾಜೇಂದ್ರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದ್ದು, ಮೃತರೆಲ್ಲರೂ ಒಡಿಶಾ ಮೂಲದ ಕಾರ್ಮಿಕರು ಎಂದು ತಿಳಿದುಬಂದಿದೆ. "ಎ1 ಏರ್ ಕೂಲರ್ಸ್" ತಂಡದ ಶೆಡ್ ಗೆ ಬೆಂಕಿ ಬಿದ್ದಿದ್ದು, ಅಗ್ನಿ ಅವಘಡಕ್ಕೆ ಏರ್ ಕೂಲರ್ ಒಂದರಲ್ಲಿನ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗುತ್ತಿದ್ದರೂ, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಇನ್ನು ಘಟನೆಯಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುಮಾರು 4ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಸತತ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಅಗ್ನಿ ಅವಘಡ ಸಂದರ್ಭದಲ್ಲಿ ಘಟಕದಲ್ಲಿ ಎಷ್ಟು ಮಂದಿ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿಲ್ಲ. ಕಾರ್ಯಾಚರಣೆ ಮುಕ್ತಾಯದ ಬಳಿಕವಷ್ಟೇ ಎಲ್ಲ ಮಾಹಿತಿ ತಿಳಿಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರು ಮಂದಿ ಮೃತರ ಪೈಕಿ ನಾಲ್ಕು ಮಂದಿಯ ಮೃತ ದೇಹಗಳನ್ನು ಗುರುತಿಸಲಾಗಿದ್ದು, ಮೃತರನ್ನು ಇರ್ಫಾನ್, ಸದ್ದಾಂ, ಶಾರುಖ್ ಮತ್ತು ಅಯೂಬ್ ಖಾನ್ ಎಂದು ಹೇಳಲಾಗುತ್ತಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಶಂಕೆ ಇದೆ.
Advertisement