
ಬಂಡಿಪೋರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರ ಜಿಲ್ಲೆಯಲ್ಲಿ ಭಾರತೀಯ ಸೇನೆ ಎನ್'ಕೌಂಟರ್ ನಡೆಸಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಿರುವುದಾಗಿ ಮಂಗಳವಾರ ತಿಳಿದುಬಂದಿದೆ.
ಬಂಡಿಪೋರ ಜಿಲ್ಲೆಯ ಪರ್ರೆ ಮೊಹಲ್ಲಾ ಹಜ್ಜಿನ್ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವುದಾಗಿ ಮಾಹಿತಿ ತಿಳಿದುಬರುತ್ತಿದ್ದಂತೆ ಭಾರತೀಯ ಸೇನೆ ಕಾರ್ಯಾಚರಣೆಗಿಳಿದಿತ್ತು. ಈ ವೇಳೆ ಉಗ್ರರು ಸೇನೆ ಮೇಲೆ ಗುಂಡಿನ ದಾಳಿನಡೆಸಲು ಆರಂಭಿಸಿದ್ದಾರೆ.
ಕೂಡಲೇ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ ಸೇನೆ ಓರ್ವ ಉಗ್ರನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಕಾರ್ಯಾಚರಣೆ ಮುಂದುವರೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ. ದಾಳಿ ವೇಳೆ ಓರ್ವ ಯೋಧನಿಗೆ ಗಾಯವಾಗಿರುವುದಾಗಿ ವರದಿಗಳು ತಿಳಿಸಿವೆ.
ನಿನ್ನೆಯಷ್ಟೇ ಜಮ್ಮು ಜಿಲ್ಲೆಯ ಅಖ್ನೂರ್ ಪ್ರದೇಶದಲ್ಲಿರುವ ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ (ಜಿಆರ್ ಇಎಫ್) ನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ದಾಳಿ ವೇಳೆ ಜಿಆರ್ ಇಎಫ್ ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರನ್ನು ಉಗ್ರರು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು.
Advertisement