
ಸೂರತ್: ನೋಟು ನಿಷೇಧ ಬಳಿಕ ಉಂಟಾಗಿದ್ದ ನಗದು ಕೊರೆತೆಯಿಂದಾಗಿ ಜನ ನೋಟಿಗಾಗಿ ಪರದಾಡುತ್ತಿರುವಂತೆಯೇ ಗುಜರಾತ್ ನ ಸೀರೆ ವ್ಯಾಪಾರಿಗಳು ಅದನ್ನೇ ತಮ್ಮ ಬಂಡವಾಳವಾಗಿಸಿಕೊಂಡು 2000 ರು. ನೋಟಿನ ಚಿತ್ರ ವಿರುವ ಸೀರೆಗಳನ್ನು ತಯಾರಿಸಿದ್ದಾರೆ.
ಗುಜರಾತ್ ನ ಸೂರತ್ ನಲ್ಲಿನ ಬಟ್ಟೆ ಅಂಗಡಿಗಳಲ್ಲಿ ಇದೀಗ ಈ ಸೀರೆಗಳದ್ದೇ ದರ್ಬಾರ್, ಗುಲಾಬಿ ಬಣ್ಣದ ನೋಟುಗಳನ್ನು ಮುದ್ರಿಸಲಾಗಿರುವ ಈ ಸೀರೆಗಳನ್ನು ಕೊಳ್ಳಲು ಸೂರತ್ ನ ನಾರಿಯರು ಮುಗಿ ಬಿದ್ದಿದ್ದು, 2000 ರು. ನೋಟುಗಳ ಚಿತ್ರವಿರುವ ಈ ಸೀರೆ ಇದೀಗ ವ್ಯಾಪಕವಾಗಿ ಮಾರಾಟವಾಗುತ್ತಿದೆ. ಒಂದರ್ಥದಲ್ಲಿ ಗುಜರಾತ್ ಜವಳಿ ಉಧ್ಯಮದಲ್ಲಿ ಈ ಹೊಸ 2000 ರು.ನೋಟಿನ ಸೀರೆ ಹೊಸ ಟ್ರೆಂಡ್ ಆಗಿದ್ದು, ಇತರೆ ಜಿಲ್ಲೆಗಳಿಗೂ ಈ ಸೀರೆಗಳನ್ನು ವಿಸ್ತರಿಸುವ ಉದ್ದೇಶವನ್ನು ಸೀರೆ ವ್ಯಾಪಾರಿಗಳು ಹೊಂದಿದ್ದಾರೆ.
ಪ್ರಧಾನಿ ಮೋದಿ ಕಳೆದ ನವೆಂಬರ್ 8ರಂದು 500 ಮತ್ತು 1000 ರು. ನೋಟುಗಳ ನಿಷೇಧ ಮಾಡಿ ಹೊಸ 500 ಮತ್ತು 2000 ರು.ನೋಟುಗಳನ್ನು ಚಲಾವಣೆಗೆ ತಂದಿದ್ದರು. ನಿಷೇಧವಾದ ನೋಟಿಗಿಂತ ಹೊಸ ನೋಟುಗಳ ಪ್ರಮಾಣ ಕಡಿಮೆ ಇದ್ದರಿಂದ ಸಾಮಾನ್ಯವಾಗಿಯೇ ನಗದು ಬಿಕ್ಕಟ್ಟು ಎದುರಾಗಿದೆ. ಹೀಗಾಗಿ ಹೊಸ ಗುಲಾಬಿ ಬಣ್ಣದ ನೋಟುಗಳಿಗೆ ಎಲ್ಲೆಡೆ ವ್ಯಾಪಕ ಬೇಡಿಕೆ ಕಂಡುಬಂದಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಸೂರತ್ ಬಟ್ಟೆ ವ್ಯಾಪಾರಿಗಳು 2000 ರು.ನೋಟಿನ ಚಿತ್ರಗಳಿರುವ ಸೀರೆಗಳನ್ನು ಉತ್ಪಾದಿಸಿ ಭರ್ಜರಿ ವ್ಯಾಪಾರ ಮಾಡಿಕೊಳ್ಳುತ್ತಿದ್ದಾರೆ.
Advertisement