ಪ್ರಧಾನಿ ಭೇಟಿ ಮಾಡಿದ ಸಿಎಂ ಪನ್ನೀರ್ ಸೆಲ್ವಂ; ಕೇಂದ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ

ತಮಿಳುನಾಡಿನಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿರುವ ಜಲ್ಲಿಕಟ್ಟು ಮೇಲಿನ ನಿಷೇಧ ಸಂಬಂಧ ಸಿಎಂ ಪನ್ನೀರ್ ಸೆಲ್ವಂ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಈ ವೇಳೆ ಪ್ರಧಾನಿ ಮೋದಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಧಾನಿ ಭೇಟಿ ಮಾಡಿದ ಸಿಎಂ ಪನ್ವೀರ್ ಸೆಲ್ವಂ
ಪ್ರಧಾನಿ ಭೇಟಿ ಮಾಡಿದ ಸಿಎಂ ಪನ್ವೀರ್ ಸೆಲ್ವಂ

ನವದೆಹಲಿ: ತಮಿಳುನಾಡಿನಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿರುವ ಜಲ್ಲಿಕಟ್ಟು ಮೇಲಿನ ನಿಷೇಧ ಸಂಬಂಧ ಸಿಎಂ ಪನ್ನೀರ್ ಸೆಲ್ವಂ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಈ ವೇಳೆ  ಪ್ರಧಾನಿ ಮೋದಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ ಪ್ರಧಾನಿಗಳ ನಿವಾಸಕ್ಕೆ ತೆರಳಿದ್ದ ಪನ್ನೀರ್ ಸೆಲ್ವಂ ಅವರು ತಮಿಳುನಾಡಿನ ಪ್ರಸ್ತುತ ಪರಿಸ್ಥಿತಿ ಹಾಗೂ ಇತ್ತೀಚಿನ ಬೆಳವಣಿಗೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದು, ಬರ ಪೀಡಿತ  ಗ್ರಾಮಗಳ ಕುರಿತು ಮಾಹಿತಿ ನೀಡಿದ್ದಾರೆ. ಅಂತೆಯೇ ತಮಿಳುನಾಡಿನ ಸಾಂಸ್ಕೃತಿಕ ಸಂಕೇತವಾಗಿರುವ ಜಲ್ಲಿಕಟ್ಟು ಆಚರಣೆಗೆ ಅನುಮತಿ ನೀಡಬೇಕು ಎಂದು ಸಿಎಂ ಕೋರಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ  ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ತಮಿಳುನಾಡಿನ ಸಾಂಸ್ಕೃತಿಕ ಆಚರಣೆಯನ್ನು ಶ್ಲಾಘಿಸಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಜಲ್ಲಿಕಟ್ಟು ಸಮಸ್ಯೆ ಬಗೆಹರಿಸುವ ಸಂಬಂಧ ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು  ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಅಲ್ಲದೆ ಕೇಂದ್ರ ತಜ್ಞರ ಒಂದು ತಂಡವನ್ನು ತಮಿಳುನಾಡಿಗೆ ಕಳುಹಿಸಿ ವರದಿ ಪಡೆಯುವುದಾಗಿಯೂ ಮತ್ತು ಬರ ಪರಿಸ್ಥಿತಿ ಸಂಬಂಧ ತಮಿಳುನಾಡಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ  ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದ್ದು, ತಮಿಳುನಾಡಿನ ಬರ ಪೀಡಿತ ಗ್ರಾಮಗಳಿಗೆ ಕೇಂದ್ರದ ತಜ್ಞರ ತಂಡ ಭೇಟಿ ನೀಡಲಿದೆ. ಈ ವೇಳೆ ವರದಿ ತಯಾರಿಸಿ ಸರ್ಕಾರಕ್ಕೆ ನೀಡಲಿದೆ. ವರದಿಯನ್ನಾಧರಿಸಿ ಸರ್ಕಾರ  ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಟ್ವೀಟ್ ಮಾಡಿದೆ. ಅಂತೆಯೇ ಜಲ್ಲಿಕಟ್ಟು ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿರುವ ಪಿಎಂಒ ಕಳೆದ ಮೂರು ದಿನಗಳಿಂದ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಚಾರವನ್ನು ಕೇಂದ್ರ  ಸರ್ಕಾರ ಗಮನಿಸುತ್ತಿದ್ದು, ಜಲ್ಲಿಕಟ್ಟು ಆಚರಣೆಗೆ ನಿಷೇಧ ಹೇರಿರುವ ವಿಚಾರವನ್ನು ಚರ್ಚೆ ನಡೆಸಲಾಗುತ್ತಿದೆ. ಶೀಘ್ರ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com