
ಇಟಾ (ಉತ್ತರಪ್ರದೇಶ): ಉತ್ತರಪ್ರದೇಶ ಇಟಾ ಜಿಲ್ಲೆಯಲ್ಲಿ ನಿನ್ನೆಯಷ್ಟೇ ನಡೆದ ಶಾಲಾ ಬಸ್ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟಾ ಶಿಕ್ಷಣ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ಶುಕ್ರವಾರ ತಿಳಿದುಬಂದಿದೆ.
ಜಿಲ್ಲಾ ಆಡಳಿತ ಆದೇಶ ನೀಡಿದ್ದರು ಶಾಲೆಯನ್ನು ಅಕ್ರಮವಾಗಿ ತೆರೆಯಲಾಗಿತ್ತು. ನಿನ್ನೆ ನಡೆದ ದುರ್ಘಟನೆ ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಅಲ್ಲದೆ, ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ಪೊಲೀಸ್ ಅಧಿಕಾರಿ ದಲಿಜೀತ್ ಸಿಂಗ್ ಚೌಧರಿಯವರು ಹೇಳಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಶಾಲಾ ಆಡಳಿತ ಹಾಗೂ ಬಸ್ ಚಾಲಕನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು. ಅಲ್ಲದೆ, ಅಧಿಕಾರಿಗಳು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರು.
ನಿನ್ನೆಯಷ್ಟೇ ಉತ್ತರಪ್ರದೇಶದ ಇಟಾ ಜಿಲ್ಲೆಯಲ್ಲಿ ಶಾಲಾ ಬಸ್ ಹಾಗೂ ಲಾರಿ ಎರಡು ಮುಖಾಮುಖಿ ಡಿಕ್ಕಿಹೊಡೆದಿದ್ದವು. ಘಟನೆಯಲ್ಲಿ ಬಸ್ ನಲ್ಲಿ 15 ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟಿದ್ದರು. 40ಕ್ಕೂ ಹೆಚ್ಚು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು.
ದುರ್ಘಟನೆ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದರು. ಆಕಸ್ಮಿಕವಾಗಿ ಸಂಭವಿಸಿರುವ ಈ ಘಟನೆ ನೋವುಂಟು ಮಾಡಿದೆ. ಗಾಯಗೊಂಡಿರುವ ಮಕ್ಕಳು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಹೇಳಿದ್ದರು.
ಇದಲ್ಲದೆ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರೂ ಕೂಡ ಘಟನೆ ಕುರಿತಂತೆ ಸಂತಾಪವನ್ನು ಸೂಚಿಸಿದ್ದರು.
Advertisement