ನಿಯಮ ಉಲ್ಲಂಘಿಸಿ ಪ್ರತಿಭಟನೆಯಲ್ಲಿ ಭಾಗಿ: ಶಿಕ್ಷಕರ ವೇತನಕ್ಕೆ ಕತ್ತರಿ ಹಾಕಿದ ಜೆಎನ್'ಯು
ನವದೆಹಲಿ: ನಿಯಮ ಉಲ್ಲಂಘಿಸಿ ವಿಶ್ವವಿದ್ಯಾಲಯದ ವಿರುದ್ಧ ಜನವರಿ 17 ರಂದು ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಶಿಕ್ಷಕರ ಒಂದು ದಿನದ ವೇತನವನ್ನು ಕಡಿತಗೊಳಿಸುವುದಾಗಿ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ ಹೇಳಿಕೊಂಡಿದೆ.
ಕೆಲ ದಿನಗಳ ಹಿಂದಷ್ಟೇ ವಿವಿ ನಡೆಸಿದ್ದ ಕೌನ್ಸಿಲಿಂಗ್ ಸಭೆಯಲ್ಲಿ ಬೋದನಾ ವಿಭಾಗದ ಸದಸ್ಯರಿಗೆ ಸಂಬಂಧಿಸಿದ್ದಂತೆ ಕೆಲ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ಇದಕ್ಕೆ ಕೆಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿರೋಧ ವ್ಯಕ್ತಪಡಿಸಿ ಜನವರಿ 17 ರಂದು ಒಂದು ದಿನದ ಕಾಲ ಪ್ರತಿಭಟನೆ ನಡೆಸಿದ್ದರು.
ಈ ಪ್ರತಿಭಟನೆಗೆ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಅಧಿಕಾರಿಗಳ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಎನ್ ಯು ರಿಜಿಸ್ಟ್ರಾರ್ ಪ್ರಮೋದ್ ಕುಮಾರ್ ಅವರು, ಜ.17 ರಂದು ನಡೆದ ಪ್ರತಿಭಟನೆ ಸಂಬಂಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬೋದನಾ ವಿಭಾಗದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ. ಕೆಲ ಶಿಕ್ಷಕರು ವಿವಿಯ ನಿಯಮಗಳನ್ನು ಉಲ್ಲಂಘನೆ ಮಾಡಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಪ್ರತಿಭಟನಾ ದಿನದಂದು ಕೆಲಸ ಮಾಡದ ಶಿಕ್ಷಕರಿಗೆ ವೇತನವನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ವಿವಿಯ ಈ ಕ್ರಮದ ವಿರುದ್ಧ ಶಿಕ್ಷಕರು ವಿರೋಧ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಪರವಾಗಿದ್ದ ಕಾರಣಕ್ಕೆ ಮೊದಲು ನಮಗೆ ನೋಟಿಸ್ ಜಾರಿ ಮಾಡಿದ್ದರು. ಇದೀಗ ವೇತನ ಕಡಿತಗೊಳಿಸುವ ಬೆದರಿಕೆಯನ್ನು ಹಾಕುತ್ತಿದ್ದಾರೆ. ಆಡಳಿತಾಧಿಕಾರಿಗಳು ಹೇಳುತ್ತಿರುವ ಪ್ರಕಾರ ಕೇಂದ್ರೀಯ ನಾಗರೀಕ ಸೇವೆಯ ನಿಯಮಕ್ಕೆ ಶಿಕ್ಷಕರು ಒಳಪಡುವುದಿಲ್ಲ ಎಂದು ಶಿಕ್ಷಕ ಅಜಯ್ ಪಟ್ನಾಯಕ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ