
ನವದೆಹಲಿ: 2ಜಿ ತರಂಗಾಂತರ ಹಂಚಿಕೆ ವಿವಾದದ ಏರ್ ಸೆಲ್-ಮ್ಯಾಕ್ಸಿಸ್ ಪ್ರಕರಣದ ತೀರ್ಪನ್ನು ಇದೇ ಫೆಬ್ರವರಿ 2ರಂದು ನೀಡುವುದಾಗಿ ವಿಶೇಷ ನ್ಯಾಯಾಲಯ ಮಂಗಳವಾರ ಹೇಳಿದೆ.
ಮಾಜಿ ಕೇಂದ್ರ ಸಚಿವ ದಯಾನಿದಿ ಮಾರನ್ ಮತ್ತು ಅವರ ಸಹೋದರ ಕಲಾನಿಧಿ ಮಾರನ್ ರ ಪಾತ್ರವಿರುವ ಏರ್ ಸೆಲ್-ಮ್ಯಾಕ್ಸಿಸ್ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಇದೇ ಫೆಬ್ರವರಿ 2ರಂದು ತೀರ್ಪು ನೀಡುವುದಾಗಿ ವಿಶೇಷ ನ್ಯಾಯಾಲಯ ಹೇಳಿದೆ. ಇಂದು ನಡೆದ ವಿಚಾರಣೆಯಲ್ಲಿ ತೀರ್ಪು ನೀಡುವ ಕುರಿತು ನ್ಯಾಯಮೂರ್ತಿ ಓಪಿ ಸೈನಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಫೆಬ್ರವರಿ 2ರಂದು ಪ್ರಕರಣದ ತೀರ್ಪು ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಅಂತೆಯೇ ಮಾರನ್ ಸಹೋದರರು ಮತ್ತು ಪ್ರಕರಣದ ಇತರೆ ಆರೋಪಿಗಳ ಜಾಮೀನು ಅರ್ಜಿಯನ್ನು ಮಾರನೆಯ ದಿನ ಅಂದರೆ ಫೆಬ್ರವರಿ 3ರಂದು ವಿಚಾರಣೆ ನಡೆಸಲಾಗುವುದು ಎಂದು ಓಪಿ ಸೈನಿ ಹೇಳಿದ್ದಾರೆ.
ಮಲೇಷ್ಯಾದ ಟೆಲಿಕಾಂ ಕಂಪೆನಿಯಿಂದ ಮಾರನ್ ಅವರು ಸುಮಾರು 547 ಕೋಟಿ ರುಪಾಯಿ ಲಂಚ ಪಡೆದು, ತಮ್ಮ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು. ಆದರೆ ಈ ಆರೋಪಗಳನ್ನು ಮಾರನ್ ಅಲ್ಲಗಳೆದಿದ್ದಾರೆ. ಏರ್‌ಸೆಲ್ ಮ್ಯಾಕ್ಸಿಸ್'ನ ಹಣಕಾಸು ವ್ಯವಹಾರಗಳನ್ನು ಪರಿಶೀಲನೆ ನಡೆಸುತ್ತಿರುವ ತನಿಖಾ ಸಂಸ್ಥೆ ಬ್ರಿಟನ್ ಮತ್ತು ಕೆರಿಬಿಯನ್ ದೇಶವಾದ ಬರ್ಮುಡಾಗಳಿಂದ ಭಾರತದ ಕಂಪೆನಿಗಳಿಗೆ ಹಣಕಾಸು ವ್ಯವಹಾರ ನಡೆದಿರುವುದನ್ನು ಪತ್ತೆ ಮಾಡಿತ್ತು. ಈ ಸಂಸ್ಥೆಗಳ ಹಣಕಾಸಿನ ವ್ಯವಹಾರ ಕುರಿತು ಮಾಹಿತಿ ನೀಡುವಂತೆ ನ್ಯಾಯಾಂಗದ ಮೂಲಕವೇ ಮನವಿ ಕಳುಹಿಸಲು ನಿರ್ಧರಿಸಲಾಗಿತ್ತು. ಬರ್ಮುಡಾ, ಬ್ರಿಟನ್ ಅಲ್ಲದೇ, ಮಲೇಷ್ಯಾ ಮತ್ತು ಮಾರಿಷಸ್'ಗಳಿಗೂ ಸಿಬಿಐ ಇಂತಹದೇ ಮನವಿ ಮಾಡಿತ್ತು.
ದಯಾನಿಧಿ ಮಾರನ್ ಜತೆಗೆ ಅವರ ಸಹೋದರ ಹಾಗೂ ಸನ್ ಟಿವಿ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಕಲಾನಿಧಿ ಮಾರನ್, ಮ್ಯಾಕ್ಸಿಸ್ ಕಮ್ಯುನಿಕೇಷನ್ ಅಧ್ಯಕ್ಷ ಟಿ.ಆನಂದ ಕೃಷ್ಣ, ಆಸ್ಟ್ರೊ ಆಲ್ ಏಷ್ಯಾ ನೆಟ್‌ವರ್ಕ್‌ನ ಹಿರಿಯ ಅಧಿಕಾರಿ ರಾಲ್ಫ್ ಮಾರ್ಷಲ್, ಆಸ್ಟ್ರೊ ಆಲ್ ಏಷ್ಯಾ ನೆಟ್‌ವರ್ಕ್, ಸನ್ ಟಿವಿ ಮತ್ತು ಮ್ಯಾಕ್ಸಿಸ್ ಕಮ್ಯುನಿಕೇಷನ್ ಕಂಪೆನಿಗಳ ವಿರುದ್ಧವೂ ಸಿಬಿಐ ಅವ್ಯವಹಾರದ ಆರೋಪ ಮಾಡಿದೆ.
Advertisement