ಕ್ಷುಲ್ಲಕ ಕಾರಣಕ್ಕೆ ಜಗಳ: ಕೋಪಗೊಂಡು ಹೆತ್ತ ಮಗುವನ್ನೇ ಮೆಟ್ಟಿಲಿಂದ ಕೆಳಗೆಸೆದ ಮಹಾತಾಯಿ

ಆಸ್ತಿ ವಿಚಾರ ಸಂಬಂಧ ಅತ್ತೆ-ಮಾವನೊಂದಿಗೆ ಜಗಳವಾಡಿ, ಕೋಪಗೊಂಡ ಮಹಿಳೆಯೊಬ್ಬರು ಹೆತ್ತ ಮಗುವನ್ನೇ ಮೆಟ್ಟಿಲಿನಿಂದ ಕೆಳಗೆ ಎಸೆದಿರುವ ಹೃದಯ ವಿದ್ರಾವಕ ಘಟನೆಯೊಂದು ರಾಜಧಾನಿ ದೆಹಲಿಯಲ್ಲಿ ನಡೆದಿದೆ...
ನಿದ್ರಿಸುತ್ತಿದ್ದ ಮಗುವನ್ನು ಎತ್ತಿಕೊಂಡು ಮೆಟ್ಟಿನಿಂದ ಕೆಳಗೆ ಎಸೆಯುತ್ತಿರುವ ಚಿತ್ರ
ನಿದ್ರಿಸುತ್ತಿದ್ದ ಮಗುವನ್ನು ಎತ್ತಿಕೊಂಡು ಮೆಟ್ಟಿನಿಂದ ಕೆಳಗೆ ಎಸೆಯುತ್ತಿರುವ ಚಿತ್ರ

ನವದೆಹಲಿ: ಆಸ್ತಿ ವಿಚಾರ ಸಂಬಂಧ ಅತ್ತೆ-ಮಾವನೊಂದಿಗೆ ಜಗಳವಾಡಿ, ಕೋಪಗೊಂಡ ಮಹಿಳೆಯೊಬ್ಬರು ಹೆತ್ತ ಮಗುವನ್ನೇ ಮೆಟ್ಟಿಲಿನಿಂದ ಕೆಳಗೆ ಎಸೆದಿರುವ ಹೃದಯ ವಿದ್ರಾವಕ ಘಟನೆಯೊಂದು ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಸೋನು ಗುಪ್ತಾ ಮಗುವನ್ನು ಮೆಟ್ಟಿಲಿನಿಂದ ಕೆಳಗೆ ಎಸೆದ ತಾಯಿ ಎಂದು ತಿಳಿದುಬಂದಿದೆ. ಆಸ್ತಿ ವಿಚಾರ ಸಂಬಂಧ ತನ್ನ ಮನೆಯವರೊಂದಿಗೆ ಜಗಳ ಮಾಡಿದ್ದ ಸೋನು ಗುಪ್ತಾ, ಅತ್ತೆ ಹಾಗೂ ಮಾವನ ಮೇಲಿದ್ದ ಕೋಪಕ್ಕೆ ಮಲಗಿದ್ದ ತನ್ನ 2 ವರ್ಷದ ಮಗುವನ್ನು ಎಳೆದೊಯ್ದು ಮೆಟ್ಟಿಲಿನಿಂದ ಕೆಳಗೆ ಎಸೆದಿದ್ದಾರೆ. ಈ ದೃಶ್ಯಾವಳಿಗಳು ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಯಲ್ಲಿರುವ ಪ್ರಕಾರ, ಸೋನು ಗುಪ್ತಾ ಮಗುವನ್ನು ಎಸೆದಿದ್ದು, ಮೆಟ್ಟಿನಿಂದ ಕೆಳಗೆ ಬಿದ್ದ ಮಗುವಿಗೆ ತಲೆ ಮತ್ತು ಮುಖಕ್ಕೆ ಗಾಯಗಳಾಗಿರುವುದು ಕಂಡು ಬಂದಿದೆ. ಪ್ರಕರಣ ಸಂಬಂಧ ಸೋನು ಗುಪ್ತಾ ಪತಿ ನಿತಿನ್ ಗುಪ್ತಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೋನು ಗುಪ್ತಾಳನ್ನು ಬಂಧನಕ್ಕೊಳಪಡಿಸಿ, ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಇನ್ನು ಘಟನೆ ಸಂಬಂಧ ಹೇಳಿಕೆ ನೀಡಿರುವ ಸೋನು ಗುಪ್ತಾ ಅತ್ತೆ ಮಮ್ಲೇಶ್ ಗುಪ್ತಾ ಅವರು, ಕೆಲ ವರ್ಷಗಳ ಹಿಂದಷ್ಟೇ ನನ್ನ ಮಗ ಪ್ರೀತಿಸಿ ವಿವಾಹವಾಗಿದ್ದ. ಮದುವೆಯಾದ ಕೆಲವೇ ವಾರಗಳಲ್ಲಿ ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ಐದು ವರ್ಷಗಳಿಂದಲೂ ಮನೆಯಲ್ಲಿ ಶಾಂತಿಯಿಲ್ಲ. ಆಸ್ತಿ ವಿಚಾರ ಕುರಿತಂತೆ ಪ್ರತೀ ದಿನ ಜಗಳವಾಗುತ್ತಲೇ ಇದೆ. ಈ ಬಗ್ಗೆ ಸಾಕಷ್ಟು ಬಾರಿ ಆಕೆಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದೆ. ಆದರೆ, ನಾನು ಏನೇ ಹೇಳಿದರೂ ಆಕೆ ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಆಸ್ತಿಯನ್ನು ಆಕೆಯ ಹೆಸರಿಗೆ ಮಾಡಬೇಕೆಂದು ಹೇಳುತ್ತಲೇ ಇದ್ದಳು. ಈ ವಿಚಾರದಲ್ಲಿ ಮಾತನಾಡಲು ಹೋದಾಗ ನನಗೂ ಹೊಡೆದಿದ್ದಳು ಎಂದು ಹೇಳಿದ್ದಾರೆ.

ನನಗೆ ಒಬ್ಬನೇ ಮಗನಿದ್ದು, ನಾವು ಹೋದ ಬಳಿಕ ಎಲ್ಲವೂ ನಿನ್ನ ಪಾಲಿಗೆ ಆಗಲಿದೆ ಎಂದು ಹೇಳುತ್ತಿದ್ದೆ. ಈ ಬಗ್ಗೆ ನನ್ನ ಪತಿ ಕೂಡ ಆಕೆ ಬಳಿ ಮಾತನಾಡಿದ್ದರು. ಆದರೂ ಆಕೆ ಜಗಳವಾಡುವುದನ್ನು ಬಿಡುತ್ತಿರಲಿಲ್ಲ. ಐದು ತಿಂಗಳ ಹಿಂದೆ ಜಗಳ ಗಂಭೀರವಾಗಿತ್ತು. ನಮ್ಮ ವಿರುದ್ಧವೇ ಸೊಸೆ ಪೊಲೀಸರಿಗೆ ದೂರು ನೀಡಿದ್ದಳು. ಸಂಧಾನದ ಬಳಿಕ ಎಲ್ಲವೂ ಸರಿ ಹೋಗಿತ್ತು. ಆದರೂ ಭಯಗೊಂಡು ಸಾಕ್ಷ್ಯಾಧಾರಕ್ಕಾಗಿ ಮುಂಜಾಗ್ರತೆಯಿಂದ ನಾನು ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದೆ.

ಮಗುವನ್ನು ಸಾಯಿಸಿ, ನಿಮ್ಮ ಮೇಲೆ ದೂರು ದಾಖಲಿಸುತ್ತೇನೆಂದು ಪ್ರತೀ ಬಾರಿ ಜಗಳವಾದರೂ ಆಕೆ ನಮಗೆ ಬೆದರಿಕೆ ಹಾಕುತ್ತಿದ್ದಳು. ಇದರಂತೆ ಜಗಳವಾದಾಗ ಆಕೆ ಮಗುವನ್ನು ಮೆಟ್ಟಿಲಿನಿಂದ ಕಳೆಗೆ ಎಸೆದಿದ್ದಾಳೆ. ದೇವರ ದಯೆ ಅದೇ ಸಮಯದಲ್ಲಿ ಮನೆಯ ಮೊದಲ ಮಹಡಿಯಲ್ಲಿ ಕೆಲಸದಾಕೆ ಬಟ್ಟೆ ಒಗೆಯುತ್ತಿದ್ದಳು. ಮಗು ಕೆಳಗೆ ಹೋಗುತ್ತಿದ್ದಂತೆ ಆಕೆ ರಕ್ಷಣೆ ಮಾಡಿದ್ದಳು ಎಂದು ತಿಳಿಸಿದ್ದಾರೆ.

ಮಗುವಿನ ತಲೆ ಹಾಗೂ ಕೈಕಾಲುಗಳಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ಆದರೆ, ಈಗಲೂ ಮಗು ಭಯದಿಂದ ಹೊರಬಂದಿಲ್ಲ. ಪ್ರಸ್ತುತ ಮಗು ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com