

ನವದೆಹಲಿ: ಚುನಾವಣೆ ಪ್ರಚಾರ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ನಿಂದ ಲಂಚ ಪಡೆದು ಆಪ್'ಗೇ ಮತ ಹಾಕುವಂತೆ ಹೇಳಿಕೆ ನೀಡಿದ್ದ ಕೇಜ್ರಿವಾಲ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೆಹಲಿ ಪೊಲೀಸರಿಗೆ ಚುನಾವಣಾ ಆಯೋಗ ಭಾನುವಾರ ಸೂಚನೆ ನೀಡಿದೆ.
ಈ ತಿಂಗಳ ಆರಂಭದಲ್ಲಿ ಗೋವಾದ ಬೆನೌಲಿಮ್ ನಲ್ಲಿ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಅಥವಾ ಬಿಜೆಪಿ ಅಭ್ಯರ್ಥಿಗಳು ಹಣ ನೀಡಿದರೆ ಅದನ್ನು ತೆಗೆದುಕೊಳ್ಳಿ. ಅದನ್ನು ನಿಮ್ಮ ಹಣವೆಂದೇ ಸ್ವೀಕರಿಸಿ. ಆದರೆ ಮತ ಚಲಾಯಿಸುವ ಸಂದರ್ಭದಲ್ಲಿ ಆಪ್ ಅಭ್ಯರ್ಥಿ ಪರ ಮತ ಚಲಾಯಿಸಿ ಎಂದು ಹೇಳಿದ್ದರು.
ಈ ಹೇಳಿಕೆಯನ್ನು ಚುನಾವಣಾ ಆಯೋಗ ತೀವ್ರವಾಗಿ ಆಕ್ಷೇಪಿಸಿತ್ತು. ಅಲ್ಲದೆ, ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡುವಂತೆ ಕೇಜ್ರಿವಾಲ್ ವಿರುದ್ಧ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್ ಗೆ ಉತ್ತರ ನೀಡಿದ್ದ ಕೇಜ್ರಿವಾಲ್ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು, ಅಲ್ಲದೆ. ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸುವುದಾಗಿ ತಿಳಿಸಿದ್ದರು.
ಕೇಜ್ರಿವಾಲ್ ಅವರ ಈ ಉತ್ತರಕ್ಕೆ ತೀವ್ರವಾಗಿ ಕೆಂಡಾಮಂಡಲವಾಗಿರುವ ಚುನಾವಣಾ ಆಯೋಗ, ಕೇಜ್ರಿವಾಲ್ ವಿರುದ್ದ ಎಫ್ಐಆರ್ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.