
ಲಖನೌ: ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿ ಉತ್ತರಪ್ರದೇಶದ ಶಕ್ತಿಯನ್ನು ಹೆಚ್ಚಿಸಲಿದ್ದು, ನಮ್ಮ ಮೈತ್ರಿ ರಾಜ್ಯ ಅಭಿವೃದ್ಧಿ, ಸಮೃದ್ಧಿ ಹಾಗೂ ಶಾಂತಿ ಕಾಪಾಡುವ ಸಲುವಾಗಿ ಆಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಭಾನುವಾರ ಹೇಳಿದ್ದಾರೆ.
ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳ ಮೈತ್ರಿ ಕುರಿತಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಜಂಟಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ರಾಹುಲ್ ಗಾಂಧಿಯವರು, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳ ಮೈತ್ರಿ ಒಡಕು ರಾಜಕೀಯಕ್ಕೆ ಉತ್ತಮವಾದ ಉತ್ತರವಾಗಲಿದೆ ಎಂದು ಹೇಳಿದ್ದಾರೆ.
ಪಕ್ಷಗಳ ಮೈತ್ರಿ ಗಂಗಾ-ಯಮುನಾ ಸಂಗಮದಂತೆ. ಮೈತ್ರಿಯಿಂದ ರಾಜ್ಯದಲ್ಲಿ ಅಭಿವೃದ್ಧಿಯಾಗಲಿದೆ. ಅಖಿಲೇಶ್ ಅವರಿಗೆ ನಾನು ಈ ಹಿಂದೆಯೇ ಹೇಳಿದ್ದೆ, ಉತ್ತಮ ಕೆಲಸ ಮಾಡಲು ನಿಮಗೆ ಅವಕಾಶ ಸಿಗುವುದಿಲ್ಲ ಎಂದು ನಾನು ಹೇಳಿದ್ದೆ. ಅಖಿಲೇಶ್ ಹಾಗೂ ನಮ್ಮಿಬ್ಬರ ನಡುವೆ ಸಾಕಷ್ಟು ಹೋಲಿಕೆ ಹಾಗೂ ಭಿನ್ನತೆಗಳಿವೆ. ಕೆಲ ವಿಚಾರಗಳ ಬಗ್ಗೆ ನಾವು ಸಂಧಾನ ಮಾಡಿಕೊಂಡು ಮುನ್ನಡೆಯುತ್ತೇವೆಂದು ಹೇಳಿದ್ದಾರೆ.
ಇದೇ ವೇಳೆ ಸೋನಿಯಾ ಗಾಂಧಿ ಹಾಗೂ ಮುಲಾಯಂ ಸಿಂಗ್ ಯಾದವ್ ಅವರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಹುಲ್ ಅವರು, ಚುನಾವಣಾ ಪ್ರಚಾರದ ತಂತ್ರಗಳನ್ನು ನಾವು ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದ್ದಾರೆ.
ನಂತರ ಪ್ರಧಾನಿ ಮೋದಿಯವರ ವಿರುದ್ದ ವಾಗ್ದಾಳಿ ನಡೆಸಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮಗೆ ತಾವೇ ನಂಬರ್ 1 ನಾಯಕರೆಂದು ತಿಳಿದಿದ್ದಾರೆ. ಅವರ ಪ್ರಕಾರ ನಂ.2 ಇಲ್ಲ ಎಂದಿದ್ದಾರೆ.
ಭ್ರಷ್ಟಾಚಾರ ಮುಕ್ತ ಭಾರತ ಮಾಡುತ್ತೇವೆಂದು ಮಾತನಾಡುವ ಪ್ರಧಾನಿ ಮೋದಿಯವು ತಾವೇ ಸ್ವತಃ ಅಕಾಲಿ ದಳಕ್ಕೆ ಬೆಂಬಲ ವ್ಯಕ್ತಪಡಿಸುತ್ತಾರೆಂದು ತಿಳಿಸಿದ್ದಾರೆ.
ನಂತರ ಮಾತನಾಡಿದ ಅಖಿಲೇಶ್ ಯಾದವ್ ಅವರು, ನಾವು ಒಂದೇ ಸೈಕಲಿನ ಎರಡು ಚಕ್ರವಿದ್ದಂತೆ. ನಮ್ಮಲ್ಲಿ ಬೇರಾವುದೇ ವಿಭಿನ್ನತೆಗಳಿಲ್ಲ. ಇಂದಿನಿಂದ ಕಾರ್ಯ ಆರಂಭವಾಗಲಿದೆ ಎಂದು ಹೇಳಿದರು.
Advertisement