ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 200 ರು. ಮುಖಬೆಲೆಯ ಹೊಸ ನೋಟುಗಳ ಮುದ್ರಣಕ್ಕೆ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.
ನೋಟು ಮುದ್ರಣಾಲಯಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ 200.ರು ಮುಖ ಬೆಲೆಯ ನೋಟು ಮುದ್ರಣಕ್ಕೆ ಆದೇಶ ನೀಡಿದೆ ಎಂದು ಹೇಳಲಾಗುತ್ತಿದ್ದು, ಹೊಸ ನೋಟಿಗೆ ಸಂಬಂಧಿಸಿದಂತೆ ಮುದ್ರಣಾಲಯಕ್ಕೆ ಆರ್ ಬಿಐ ಈಗಾಗಲೇ ವಿನ್ಯಾಸ ಮತ್ತು ಲಕ್ಷಣಗಳ ಮಾದರಿಯನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ 200 ರು. ಮುಖಬೆಲೆಯ ಹೊಸ ನೋಟಿನ ಮುದ್ರಣಕ್ಕೆ ಸಂಬಂಧಿಸಿದಂತೆ ಆರ್ ಬಿಐ ಅಧಿಕಾರಿಗಳು ಕೇಂದ್ರ ವಿತ್ತ ಸಚಿವಾಲಯದೊಂದಿಗೆ ಚರ್ಚೆ ನಡೆಸಿ ನೋಟು ಮುದ್ರಣಕ್ಕೆ ಅನುಮೋದನೆ ಪಡೆದಿದ್ದರು. ಇದೀಗ ನೋಟಿನ ಹೊಸ ವಿನ್ಯಾಸವನ್ನು ಸಿದ್ಧಪಡಿಸಲಾಗಿದ್ದು, ಮುದ್ರಣಾಲಯಕ್ಕೆ ನೋಟಿನ ವಿನ್ಯಾಸವನ್ನು ನೀಡಿಲಾಗಿದೆ. ಅಂತೆಯೇ ನೋಟು ಮುದ್ರಣಕ್ಕೆ ಆದೇಶ ಕೂಡ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಕಳೆದ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿ, ಹಳೆಯ 500 ಮತ್ತು 1000 ರು.ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತ್ತು. ಬಳಿಕ 500 ಮತ್ತು 2000 ರು. ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತಂದಿತ್ತು. 2000 ರು. ನೋಟಿಗೆ ವ್ಯಾಪಕ ಚಿಲ್ಲರೆ ಅಭಾವ ಎದುರಾದ ಪರಿಣಾಮ ಹೆಚ್ಚುವರಿಯಾಗಿ 100 ರು.ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿತ್ತು. ಇದೀಗ ಆರ್ ಬಿಐ ಹೊಸ 200 ರು. ಮುಖಬೆಲೆಯ ನೋಟುಗಳ ಮುದ್ರಣಕ್ಕೆ ಆದೇಶ ನೀಡಿರುವುದರಿಂದ ಶೀಘ್ರದಲ್ಲೇ ಹೊಸ 200 ರು. ಮುಖಬೆಲೆಯ ನೋಟು ಚಲಾವಣೆಗೆ ಬರಲಿದ್ದು, ಚಿಲ್ಲರೆ ಅಭಾವ ತಗ್ಗುವ ನಿರೀಕ್ಷೆ ಇದೆ.
Advertisement