ನವದೆಹಲಿ; ಸಿಬಿಐ ದಾಳಿಯೊಂದು ರಾಜಕೀಯ ಪಿತೂರಿಯಾಗಿದ್ದು, ದಾಳಿಯಿಂದ ನಾನು ಕುಗ್ಗುವುದಿಲ್ಲ ಎಂದು ರಾಷ್ಟ್ರೀಯ ಜನತಾ ದಳದ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರು ಶುಕ್ರವಾರ ಹೇಳಿದ್ದಾರೆ.
ಹೋಟೆಲ್ ಗುತ್ತಿಗೆ ಅಕ್ರಮ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ದಾಳಿ ಮಾಡಿರುವ ಹಿನ್ನಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಲಾಲೂ ಅವರು, ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ತೀವ್ರವಾಗಿ ಕಿಡಿಕಾರಿದ್ದಾರೆ.
ಸಿಬಿಐ ದಾಳಿಯೊಂದು ಪಿತೂರಿಯಾಗಿದ್ದು, ಈ ತಂತ್ರಗಳಿಗೆ ನಾನಾಗಲೀ ಅಥವಾ ನನ್ನ ಪಕ್ಷವಾಗಲೀ ಕುಗ್ಗುವುದಿಲ್ಲ. ಎಲ್ಲವನ್ನು ವ್ಯವಸ್ಥೆಯಂತೆಯೇ ಮಾಡಲಾಗಿದೆ, ನಾನು ಯಾವುದೇ ತಪ್ಪನ್ನೂ ಮಾಡಿಲ್ಲ ಎಂದು ಹೇಳಿದ್ದಾರೆ.
ಸಿಬಿಐ ದಾಳಿ ಎಂದರೇನು ಎಂಬುದೂ ಯಾರಿಗೂ ತಿಳಿದಿರಲಿಲ್ಲ. ಮೋದಿಗೆ ನಿರ್ಗಮನ ಬಾಗಿಲು ತೋರಿಸುವುದಕ್ಕೆ ನಾವು ತಯಾರಿ ನಡೆಸುತ್ತಿದ್ದೇವೆ. ನನ್ನ ಮೇಲೆ ಮತ್ತು ನನ್ನ ಮಕ್ಕಳ ಮೇಲೆ ರಾಜಕೀಯ ಹಗೆತನ ಸಾಧಿಸಲಾಗುತ್ತಿದ್ದು, ಈ ಸತ್ಯವನ್ನು ರ್ಯಾಲಿಗಳ ಮೂಲಕ ಜನರಿಗೆ ತಿಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.