

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಮುಂದುವರೆದಿದ್ದು, ಶನಿವಾರ ರಾತ್ರಿ ಪುಲ್ವಾಮಾ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ಗ್ರೆನೇಡ್ ದಾಳಿ ಮಾಡಿದ್ದಾರೆ.
ಪುಲ್ವಾಮಾ ಜಿಲ್ಲೆಯ ತ್ರಾಲ್ ನಲ್ಲಿರುವ ಅರಿಪಾಲ್ ಪೊಲೀಸ್ ಠಾಣೆ ಮೇಲೆ ಉಗ್ರರು ಗ್ರೆನೇಡ್ ಎಸೆದಿದ್ದು. ಅದೃಷ್ಟವಶಾತ್ ಗ್ರೆನೇಡ್ ಪೊಲೀಸ್ ಠಾಣೆಯ ಪಕದಲ್ಲಿ ಬಿದ್ದಿದೆ. ಪರಿಣಾಮ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಠಾಣೆಯ ಸುತ್ತಮುತ್ತಲ ಪ್ರದೇಶದಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಅಂತೆಯೇ ಪರಾರಿಯಾದ ಉಗ್ರರಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹಿಜ್ಬುಲ್ ಉಗ್ರ ಬುರ್ಹಾನ್ ವಾನಿ ಹತ್ಯೆಯಾಗಿ ವರ್ಷ ಕಳೆದಿದ್ದು, ಇದಕ್ಕೆ ಪ್ರತಿಯಾಗಿ ಸೇನೆ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಉಗ್ರ ಸಂಘಟನೆಗಳು ಹಪಹಪಿಸುತ್ತಿವೆ. ಇದೇ ಕಾರಣಕ್ಕೆ ರಾಜ್ಯದ ಹಲವೆಡೆ ಉಗ್ರ ದಾಳಿಗೆ ಸಂಚು ರೂಪಿಸುತ್ತಿವೆ ಎಂದು ಹೇಳಲಾಗುತ್ತಿದೆ. ಅಂತೆಯೇ ಭಾರತೀಯ ಸೇನೆ ಕೂಡ ಸಜ್ಜಾಗಿ ನಿಂತಿದ್ದು, ಸೂಕ್ಷ ಪ್ರದೇಶಗಳಲ್ಲಿ ವ್ಯಾಪಕ ಶೋಧ ನಡೆಸುತ್ತಿದೆ.