
ನವದೆಹಲಿ: ದೆಹಲಿ ಹೊರವಲಯದ ನೊಯ್ಡಾ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ದುಬಾರಿ ಲ್ಯಾಂಬೋರ್ಗಿನಿ ಕಾರನ್ನು ಹಿಂದಿಕ್ಕುವ ಭರದಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ನೊಯ್ಡಾದ ಸೆಕ್ಟರ್ 135 ಪ್ರದೇಶದ ಸಮೀಪ ಈ ಭೀಕರ ಅಫಘಾತ ಸಂಭವಿಸಿದ್ದು, ಅಫಘಾತಕ್ಕೆ ಮುಂಬದಿ ಇದ್ದ ಸ್ವಿಫ್ಟ್ ಡಿಜೈರ್ ಕಾರೇ ಕಾರಣ ಎಂದು ಎಂದು ಹೇಳಲಾಗುತ್ತಿದೆ. ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ದುಬಾರಿ ಲ್ಯಾಂಬೋರ್ಗಿನಿ ಕಾರನ್ನು ಸ್ವಿಫ್ಟ್ ಕಾರು ಚಾಲಕ ಹಿಂದಿಕ್ಕಲು ಪ್ರಯತ್ನಿಸಿದ್ದಾನೆ. ಈ ವೇಳೆ ಕಾರು ಲ್ಯಾಂಬೋರ್ಗಿನಿ ಕಾರಿಗೆ ಗುದ್ದುವ ಅಪಾಯವಿದ್ದ ಕಾರಣ ಲ್ಯಾಂಬೋರ್ಗಿ ಕಾರು ಚಾಲಕ ಕೂಡಲೇ ತನ್ನ ಎಡಭಾಗಕ್ಕೆ ಕಾರನ್ನು ತಿರುಗಿಸಿದ್ದಾನೆ. ಆದರೆ ಲ್ಯಾಂಬೋರ್ಗಿನಿ ಕಾರಿನಿ ಹಿಂದೆ ವೇಗವಾಗಿ ಬರುತ್ತಿದ್ದ ಮಾರುತಿ ಈಕೋ ಕೂಡಲೇ ಲ್ಯಾಂಬೋರ್ಗಿನಿ ಕಾರಿಗೆ ಗುದ್ದಿದ್ದು, ಗುದ್ದಿದ ರಭಸಕ್ಕೆ ಮೂರು ಪಲ್ಟಿ ಹೊಡೆದಿದೆ.
ಮಾರುತಿ ಈಕೋ ಕಾರಿನಲ್ಲಿದ್ದ ಚಾಲಕ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು, ಕಾರು ಸಂಪೂರ್ಣ ಜಖಂ ಆಗಿದೆ. ಇವಿಷ್ಟೂ ದೃಶ್ಯಾವಳಿಗಳು ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೊಂಚ ಯಡವಟ್ಟಾಗಿದ್ದರೆ ಪಲ್ಟಿ ಹೊಡೆದ ಮಾರುತಿ ಈಕೋ ಕಾರು ರಸ್ತೆಯ ಎಡಭಾಗದಲ್ಲಿದ್ದ ಬೈಕ್ ಚಾಲಕನಿಗೂ ಗುದ್ದುತ್ತಿತ್ತು. ಆದರೆ ಅದೃಷ್ಟವಶಾತ್ ಬೈಕ್ ಚಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.
ಘಟನೆ ನಡೆದ ಕೂಡಲೇ ಗಾಯಾಳು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟು ಹೊತ್ತಿಗಾಗಲೇ ಆತ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಅಪಘಾತದಲ್ಲಿ ಸಾವನ್ನಪ್ಪಿದ ಚಾಲಕ ಪೂರ್ವ ದೆಹಲಿಯ ಮಂಡವಾಲಿ ಪ್ರದೇಶದ ನಿವಾಸಿ ಅರ್ಶದ್ ಅಹ್ಮದ್ ಎಂದು ತಿಳಿದುಬಂದಿದೆ. ದೆಹಲಿ ಪೊಲೀಸರು ಅಭಿಪ್ರಾಯಪಟ್ಟಿರುವಂತೆ ಚಾಲಕರು ಲೇನ್ ಡಿಸಿಪ್ಲಿನ್ ಮೀರುವುದರಿಂದಲೇ ಇಂತಹ ಅಫಘಾತಗಳು ಸಂಭವಿಸುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement