ಉತ್ತರ ಪ್ರದೇಶ: ಎಲ್ಇಟಿ ಅಡಗುತಾಣಗಳ ಮೇಲೆ ಜಮ್ಮು-ಕಾಶ್ಮೀರ ಪೊಲೀಸರ ದಾಳಿ; ಇಬ್ಬರ ಬಂಧನ

ಉತ್ತರಪ್ರದೇಶದಲ್ಲಿದ್ದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಅಡಗು ತಾಣಗಳ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಶಂಕಿತರನ್ನು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ...
ಸುದ್ದಿಗಾರರಿಗೆ ಮಾಹಿತಿ ನೀಡುತ್ತಿರುವ ಐಜಿಪಿ ಮುನೀರ್ ಖಾನ್
ಸುದ್ದಿಗಾರರಿಗೆ ಮಾಹಿತಿ ನೀಡುತ್ತಿರುವ ಐಜಿಪಿ ಮುನೀರ್ ಖಾನ್
Updated on
ಶ್ರೀನಗರ: ಉತ್ತರಪ್ರದೇಶದಲ್ಲಿದ್ದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಅಡಗು ತಾಣಗಳ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಶಂಕಿತರನ್ನು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ. 
ಉತ್ತರಪ್ರದೇಶದ ಮುಜಾಫರ್ ನಗರದ ನಿವಾಸಿಯಾಗಿರುವ ಸಂದೀಪ್ ಕುಮಾರ್ ಅಲಿಯಾಸ್ ಅದಿಲ್, ದಕ್ಷಿಣ ಕಾಶ್ಮೀರದ ಕುಲ್ಗಾಂ ನಿವಾಸಿಯಾಗಿರುವ ಮುನೀಬ್ ಶಾಹ್ ಬಂಧಿತ ಶಂಕಿತರೆಂದು ಹೇಳಲಾಗುತ್ತಿದೆ. 
ಬಂಧಿತ ಶಂಕಿತರಿಬ್ಬರು ದಕ್ಷಿಣ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಅಲ್ಲದೆ, ಕಾಶ್ಮೀರ ಕಣಿವೆಯಲ್ಲಿನ ಎಟಿಎಂ ಗಳನ್ನು ಲೂಟಿ ಮಾಡಲು ನಿಷೇಧಿತ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರರಿಗೆ ಸಹಕರಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಇಬ್ಬರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಐಜಿಪಿ ಮುನೀರ್ ಖಾನ್ ಹೇಳಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಕಾಶ್ಮೀರದಲ್ಲಿ ನಡೆಸಲಾಗಿದ್ದ ಎನ್ ಕೌಂಟರ್ ನಲ್ಲಿ ಬಷೀರ್ ಲಷ್ಕರಿ ಎಂಬ ಉಗ್ರನನ್ನು ಹತ್ಯೆ ಮಾಡಲಾಗಿತ್ತು. ಕಾಶ್ಮೀರ ಕಣಿವೆಯಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಗಳ ಹತ್ಯೆಗೆ ಕಾರಣನಾಗಿದ್ದ ಬಷೀರ್ ಗೆ ಆಶ್ರಯ ನೀಡಲು ಸಂದೀಪ್ ಶರ್ಮಾ ಸಹಕರಿಸಿದ್ದ. 
ಎನ್ ಕೌಂಟರ್ ನಡೆಸುತ್ತಿದ್ದ ವೇಳೆ ಸಂದೀಪ್ ಕೂಡ ಸ್ಥಳದಲ್ಲಿದ್ದ. ಕಾರ್ಯಾಚರಣೆ ವೇಳೆ ಸಂದೀಪ್'ನನ್ನು ಬಂಧನಕ್ಕೊಳಪಡಿಸಲಾಗಿತ್ತು. ಸ್ಥಳೀಯನಲ್ಲದ ಒಬ್ಬ ಉಗ್ರನಿಗೆ ಆಶ್ರಯ ನೀಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ಇದರಂತೆ ತನಿಖೆಯನ್ನು ಚುರುಕುಗೊಳಿಸಿದ್ದೆವು. 
2012ರಲ್ಲಿ ಸಂದೀಪ್ ಕಾಶ್ಮೀರಕ್ಕೆ ಬಂದಿದ್ದ. ಬೇಸಿಗೆ ಸಮಯದಲ್ಲಿ ಕಾಶ್ಮೀರಕ್ಕೆ ಬರುತ್ತಿದ್ದ ಸಂದೀಪ್, ಅಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ. ಚಳಿಗಾಲದಲ್ಲಿ ಪಂಜಾಬ್ ತೆರಳುತ್ತಿದ್ದ. ಪಂಜಾಬ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಶಾಹಿದ್ ಅಹ್ಮದ್ ಎಂಬಾತನನ್ನು ಪರಿಚಯ ಮಾಡಿಕೊಂಡಿದ್ದ. 
ಪ್ರಸಕ್ತ ವರ್ಷ ಜನವರಿ ತಿಂಗಳಿನಲ್ಲಿ ಕಾಶ್ಮೀರಕ್ಕೆ ಬಂದಿದ್ದ ಸಂದೀಪ್ ದಕ್ಷಿಣ ಕಾಶ್ಮೀರದಲ್ಲಿ ಎಟಿಎಂಗಳನ್ನು ಲೂಟಿ ಮಾಡಲು ಯೋಜನೆ ರೂಪಿಸಿದ್ದ. ಉತ್ತರಪ್ರದೇಶದಲ್ಲಿ ಬಾಡಿಗೆ ಮನೆಯೊಂದನ್ನು ತೆಗೆದುಕೊಂಡು ಸಂದೀಪ್, ಮುನೀಬ್ ಶಾ, ಶಾಹಿದ್ ಅಹ್ಮದ್ ಮತ್ತು ಮುಜಾಫರ್ ಅಹ್ಮದ್ ಅಪರಾಧ ಚಟುವಟಿಕೆಗಳಿಗೆ ಯೋಜನೆ ರೂಪಿಸುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. 
ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ದಾಳಿ ಪ್ರಕರಣಗಳು ಹೆಚ್ಚಾಗತೊಡಗಿವೆ. ಉಗ್ರ ದಾಳಿಯಿಂದಾಗಿ ಕಾಶ್ಮೀರದಲ್ಲಿ ಅಶಾಂತಿ ವಾತಾವರಣ ಉಂಟಾಗಿದ್ದರು ಸೇನಾ ಪಡೆ ಬುರ್ಹಾನ್ ವಾನಿ ಹತ್ಯೆ ಬಳಿಕ ಆತನ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದ್ದ ಸಬ್ಜಾರ್ ಭಟ್ ನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಅನಂತ್ ನಾಗ್ ಜಿಲ್ಲೆಯ ಬ್ರೆಂಥಿ ಗ್ರಾಮದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಸಬ್ಜಾರ್ ಭಟ್ ಸೇರಿದಂತೆ ಆತನ ಸಹಚರ ಅಬು ಮಾರ್ ನನ್ನು ಹತ್ಯೆ ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com