
ಪಾಟ್ನಾ: ಲಾಲೂ ಪ್ರಸಾದ್ ಯಾದವ್ ಕುಟುಂಬದ ಮೇಲೆ ನಡೆದ ಜಾರಿ ನಿರ್ದೇಶನಾಲಯ ಅಧಿಕಾರಿಗಳ ದಾಳಿ ಇದೀಗ ಜೆಡಿಯು ಹಾಗೂ ಆರ್ ಜೆಡಿ ಪಕ್ಷಗಳ ಮೈತ್ರಿಗೆ ಅಡ್ಡಿಯಾಗಿ ಪರಿಣಮಿಸಿದ್ದು, ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪ ಸುಳ್ಳು ಎಂದು ಸಾಬೀತು ಪಡಿಸುವಂತೆ ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರ ಮಕ್ಕಳಾದ ಮಿಸಾಬಾರ್ತಿ ಮತ್ತು ಪುತ್ರರ ಮನೆ ಮೇಲೆ ಇತ್ತೀಚೆಗೆ ನಡೆದ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಅಧಿಕಾರಿಗಳ ದಾಳಿ ವಿಚಾರ ಇದೀಗ ಆರ್ ಜೆಡಿ ಮತ್ತು ಜೆಡಿಯು ಪಕ್ಷಗಳ ಸ್ನೇಹದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಭ್ರಷ್ಟಾಚಾರ ಆರೋಪ ಸುಳ್ಳು ಎಂದು ಸಾಬೀತುಪಡಿಸಿ ಇಲ್ಲವೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಲಾಲು ಪುತ್ರ ತೇಜಸ್ವಿ ಯಾದವ್ ಅವರಿಗೆ ಸಿಎಂ ನಿತೀಶ್ ಕುಮಾರ್ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಇಂದು ಜೆಡಿಯು ಪಕ್ಷದ ಸಭೆ ನಡೆದಿದ್ದು, ಸಭೆಯಲ್ಲಿ ತೇಜಸ್ವಿ ಯಾದವ್ ಅವರ ರಾಜಿನಾಮೆ ಕುರಿತಂತೆ ಪಕ್ಷದ ಹಲವು ಶಾಸಕರು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ತೇಜಸ್ವಿ ಯಾದವ್ ಅವರ ಮೇಲಿನ ಭ್ರಷ್ಟಾಚಾರ ಪ್ರಕರಣ ಹಾಗೂ ಅವರ ಸಹೋದರಿ ಮಿಸಾಭಾರ್ತಿ ಅವರ ಮನೆ ಮೇಲೆ ನಡೆದ ಜಾರಿ ನಿರ್ದೇಶನಾಲಯ ಅಧಿಕಾರಿಗಳ ದಾಳಿ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ಹಲವು ಶಾಸಕರು ಆರೋಪಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಜೆಡಿಯು ವಕ್ತಾರರೊಬ್ಬರು, ಈ ಹಿಂದೆ ನಮ್ಮ ಸರ್ಕಾರದಲ್ಲಿ ಸಚಿವರಾಗಿದ್ದ ನಮ್ಮದೇ ಪಕ್ಷದ ಶಾಸಕರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಾಗ ನಿರ್ದಾಕ್ಷೀಣ್ಯವಾಗಿ ಅವರ ರಾಜಿನಾಮೆ ಪಡೆದಿದ್ದೇವೆ. ಮುಂದೆಯೂ ಕೂಡ ಇಂತಹುದೇ ಕಠಿಣ ನಿಲುವು ತಳೆಯುತ್ತೇವೆ. ಅದೇ ನಿರ್ಧಾರವನ್ನು ನಮ್ಮ ಮೈತ್ರಿ ಪಕ್ಷ ಆರ್ ಜೆಡಿಯಿಂದಲೂ ಆಶಿಸುತ್ತಿದ್ದೇವೆ ಎಂದು ಜೆಡಿಯು ವಕ್ತಾರ ನೀರಜ್ ಕುಮಾರ್ ಹೇಳಿದ್ದಾರೆ.
ಲಾಲೂ ಪ್ರಸಾದ್ ಯಾದವ್ ಅವರು ರೈಲ್ವೇ ಸಚಿವರಾಗಿದ್ದ ಸಂದರ್ಭದಲ್ಲಿ ತಮ್ಮ ಪ್ರಭಾವ ಬಳಸಿ ಪಾಟ್ನಾ ಬಳಿ ಮೂರು ಎಕರೆ ಭೂಮಿಯನ್ನು ತಮ್ಮ ಕುಟುಂಬಸ್ಥರಿಗೆ ಕೊಡಿಸಿದ್ದರು ಎಂಬ ಗಂಭೀರ ಆರೋಪ ಲಾಲೂ ಪ್ರಸಾದ್ ಅವರ ಮೇಲಿದೆ. ಪ್ರಸ್ತುತ ಈ ವಿವಾದಿತ ಭೂಮಿ ಲಾಲು ಪುತ್ರ ಹಾಗೂ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಹೆಸರಿನಲ್ಲಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಕಳೆದ ಶುಕ್ರವಾರ ಲಾಲು ಪ್ರಸಾದ್ ಅವರ ಮೇನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಇದರ ಬೆನ್ನಲ್ಲೇ ಲಾಲು ಪುತ್ರಿ ಮಿಸಾಭಾರ್ತಿ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದರು.
ಇದೇ ಕಾರಣಕ್ಕೆ ಬಿಹಾರ ಸರ್ಕಾರದಲ್ಲಿ 2ನೇ ಅಗ್ರಸ್ಥಾನದಲ್ಲಿರುವ ಲಾಲು ಪುತ್ರ ತೇಜಸ್ವಿಯಾದವ್ ರಾಜಿನಾಮೆ ನೀಡಬೇಕು ಎಂದು ಜೆಡಿಯು ಶಾಸಕರು ಆಗ್ರಹಿಸುತ್ತಿದ್ದಾರೆ.
Advertisement