ಉತ್ತರಪ್ರದೇಶ ವಿಧಾನಸಭೆಯಲ್ಲಿ ಸ್ಫೋಟಕ ವಸ್ತು ಪತ್ತೆ: ಎನ್ಐಎ ತನಿಖೆಗೆ ಸಿಎಂ ಯೋಗಿ ಆದೇಶ

ಅಮರನಾಥ ಯಾತ್ರಾರ್ಥಿಗಳ ಮೇಲಿನ ಉಗ್ರ ದಾಳಿ ಬಳಿಕ ದೇಶದ ಜನತೆಯಲ್ಲಿ ಮೂಡಿರುವ ಆತಂಕದ ನಡುವಲ್ಲೇ ಉತ್ತರಪ್ರದೇಶ ವಿಧಾನಸಭೆಯಲ್ಲಿ ಪ್ರಬಲ ಸ್ಫೋಟಕ ವಸ್ತುಗಳು ಪತ್ತೆಯಾಗಿರುವ ಆಂತಕಕಾರಿ ಬೆಳವಣಿಗೆಗಳು ಶುಕ್ರವಾರ ಕಂಡುಬಂದಿದೆ...
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ನವದೆಹಲಿ: ಅಮರನಾಥ ಯಾತ್ರಾರ್ಥಿಗಳ ಮೇಲಿನ ಉಗ್ರ ದಾಳಿ ಬಳಿಕ ದೇಶದ ಜನತೆಯಲ್ಲಿ ಮೂಡಿರುವ ಆತಂಕದ ನಡುವಲ್ಲೇ ಉತ್ತರಪ್ರದೇಶ ವಿಧಾನಸಭೆಯಲ್ಲಿ ಪ್ರಬಲ ಸ್ಫೋಟಕ ವಸ್ತುಗಳು ಪತ್ತೆಯಾಗಿರುವ ಆಂತಕಕಾರಿ ಬೆಳವಣಿಗೆಗಳು ಶುಕ್ರವಾರ ಕಂಡುಬಂದಿದೆ. 
ವಿಧಾನಸಭೆ ಕಲಾಪ ಆರಂಭಕ್ಕೂ ಮುನ್ನ ವಾಡಿಕೆಯಂತೆಯೇ ಭದ್ರತಾ ಪಡೆಗಳು ಶೋಧಕಾರ್ಯ ನಡೆಸುತ್ತಿದ್ದ ವೇಳೆ ಶ್ವಾನದಳ ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚಿವೆ. ಈ ಮೂಲಕ ರಾಜ್ಯದಲ್ಲಿ ಸ್ಫೋಟಕ್ಕೆ ಉಗ್ರರು ಸಂಚು ರೂಪಿಸಿರುವ ಶಂಕೆಗಳು ಇದೀಗ ವ್ಯಕ್ತವಾಗತೊಡಗಿವೆ. 

ಶಾಸಕರೊಬ್ಬರ ಕುರ್ಚಿಯ ಕೆಳಗೆ ಅನುಮಾನಾಸ್ಪದವಾದ ಬಿಪಿ ಪುಡಿ ಪತ್ತೆಯಾಗಿದ್ದು, ಸ್ಫೋಟಕ ವಸ್ತುಗಳು ಪತ್ತೆಯಾದ ಹಿನ್ನಲೆಯಲ್ಲಿ ಸ್ಥಳದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಪ್ರಸ್ತುತ ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದೆ. ಈ ಕುರಿತಂತೆ ತನಿಖೆಗೆ ಉತ್ತರಪ್ರದೇಶ ಸರ್ಕಾರ ಆದೇಶಿಸಿದೆ. 

ಉತ್ತರಪ್ರದೇಶ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ಬಜೆಟ್ ನ್ನು ಮಂಡಿಸಲಾಗಿತ್ತು. ಅಧಿವೇಶನ ನಡೆಯುವ ಅವಧಿಯಲ್ಲೇ ಇಂಥಹ ಘಟನೆ ನಡೆದಿರುವುದು ಭಾರಿ ಆತಂಕವನ್ನು ಸೃಷ್ಟಿ ಮಾಡಿದ್ದು, ಈ ಹಿನ್ನಲೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಉನ್ನತಾಧಿಕಾರಿಗಳ ಸಭೆ ಕರೆದಿದ್ದಾರೆ. 

ಪ್ರಸ್ತುತ ದೊರಕಿರುವ ಪುಡಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ದೇಶ, ರಾಜ್ಯದ ಭದ್ರತೆ ವಿಚಾರದಲ್ಲಿ ಯಾರೂ ರಾಜಿಯಾಗಬಾರದು: ಯೋಗಿ ಆದಿತ್ಯನಾಥ್

ದೇಶ ಹಾಗೂ ರಾಜ್ಯದ ಭದ್ರತೆ ವಿಚಾರದಲ್ಲಿ ಯಾರೊಬ್ಬರೂ ರಾಜಿಯಾಗಬಾರದು. ವಿಧಾನಸಭೆಯಲ್ಲಿ ಹಾಜರಿರುವ ಪ್ರತೀಯೊಬ್ಬರನ್ನು ವಿಚಾರಣೆಗೊಳಪಡಿಸಬೇಕೆಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ. 

ವಿಧಾನಸಭೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ವಿಧಾನಸಭೆಯಲ್ಲಿ ಪಿಇಟಿಎನ್ ಸ್ಫೋಟಕ ವಸ್ತು ಪತ್ತೆಯಾಗಿದೆ. 500 ಗ್ರಾಂ ಪಿಇಟಿಎನ್ ಸಾಕು ಇಡೀ ವಿಧಾನಸಭೆಯನ್ನು ಸ್ಫೋಟಿಸಲು, ಅಂತಹ 150 ಗ್ರಾಂ ಪಿಇಟಿಎನ್ ವಿರೋಧ ಪಕ್ಷದ ನಾಯಕರೊಬ್ಬ ಕುರ್ಚಿಯ ಕೆಳಗೆ ದೊರಕಿದೆ. ಪರಿಸ್ಥಿತಿ ಎಷ್ಟರ ಮಟ್ಟಿಗೆ ತೀವ್ರಗೊಂಡಿದೆ ಎಂಬುದನ್ನು ಇದು ಸೂಚಿಸುತ್ತಿದೆ. ವಿಧಾನಸಭೆಯಲ್ಲಿರುವ ಪ್ರತೀಯೊಬ್ಬರು ಪೊಲೀಸರ ತನಿಖೆಗೊಳಪಡಬೇಕೆಂದು ಈ ಮೂಲಕ ಸಲಹೆ ನೀಡುತ್ತಿದ್ದೇನೆ. ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸಬೇಕಿದೆ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ ಇಷ್ಟು ದೊಡ್ಡ ವಿಧಾನಸಭೆಯಲ್ಲಿ ತ್ವರಿತ ಪ್ರತಿಕ್ರಿಯೆ ತಂಡ (ಕ್ಯೂಆರ್'ಟಿ) ಇಲ್ಲದೇ ಇರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ. ಘಟನೆಯಿಂದ ರಾಜ್ಯ ಭದ್ರತೆಯಲ್ಲಿ ರಾಜಿಯಾಗಿದೆ ಎಂಬುದನ್ನು ತೋರಿಸುತ್ತಿದೆ. ದೇಶದ ಅಥವಾ ರಾಜ್ಯದ ಭದ್ರತಾ ವಿಚಾರದಲ್ಲಿ ಯಾರೇ ಆದರೂ ರಾಜಿಯಾಗಬಾರದು ಎಂದಿದ್ದಾರೆ. 

ನಂತರ ಹೊಸ ಭದ್ರತಾ ಕ್ರಮಗಳ ಕುರಿತಂತೆ ತಮ್ಮ ಎಲ್ಲಾ ಶಾಸಕರಿಗೆ ಸೂಚನೆ ನೀಡಿರುವ ಯೋಗಿ ಆದಿತ್ಯನಾಥ್ ಅವರು, ಸಂಸತ್ತಿನ ಆವರಣದಲ್ಲಿ ಮೊಬೈಲ್ ಹಾಗೂ ಬ್ಯಾಗ್ ಗಳನ್ನು ತರುವ ಶಾಸಕರಿಗೆ ಪ್ರವೇಶ ನೀಡಬಾರದು. ವಿಧಾನಸಭೆಯ ಆವರಣದ ಸುತ್ತಲೂ ತ್ವರಿತ ಪ್ರತಿಕ್ರಿಯೆ ತಂಡ ಇರಬೇಕು. ವಿಧಾನಭವನದಲ್ಲಿ ಬ್ಯಾಗ್ ಮತ್ತು ಬಾಡಿ ಸ್ಕ್ಯಾನರ್ ಗಳನ್ನು ಅಳವಡಿಸಿರಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. 

ಇದೇ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬೆಂಬಲ ಸೂಚಿಸಿರುವ ಸ್ಪೀಕರ್ ಮಾತಾ ಪ್ರಸಾದ್ ಪಾಂಡೆ ಅವರು, ಇಡೀ ವಿಧಾನಸಭೆ ಒಂದು ಕುಟುಂಬವಿದ್ದಂತೆ. ಭದ್ರತಾ ವಿಚಾರದಲ್ಲಿ ರಾಜಿಯಾಗಲು ಸಾಧ್ಯವಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com