ಔಷಧ ಮಾಫಿಯಾದಿಂದ ಬೆದರಿಕೆ: ಪ್ರಧಾನಿ ಮೋದಿಗೆ ಪತ್ರ ಬರೆದ "ಕಟ್ಟಪ್ಪ" ಸತ್ಯರಾಜ್ ಪುತ್ರಿ

ಕಳಪೆ ಔಷಧಿಗಳನ್ನೇ ರೋಗಿಗಳಿಗೆ ಬರೆದು ಕೊಡುವಂತೆ ಅಮೆರಿಕ ಮೂಲದ ಔಷಧ ತಯಾರಿಕಾ ಸಂಸ್ಥೆಗಳು ಬೆದರಿಕೆ ಹಾಕುತ್ತಿವೆ ಎಂದು ಆರೋಪಿಸಿ ದಕ್ಷಿಣ ಭಾರತದ ಖ್ಯಾತ ನಟ ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಪುತ್ರಿ ದಿವ್ಯಾ ಸತ್ಯರಾಜ್ ಅವರು ಪ್ರಧಾನಿ ಮೋದಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
ನಟ ಸತ್ಯರಾಜ್ ಪುತ್ರಿ ದಿವ್ಯಾ ಸತ್ಯರಾಜ್
ನಟ ಸತ್ಯರಾಜ್ ಪುತ್ರಿ ದಿವ್ಯಾ ಸತ್ಯರಾಜ್

ಚೆನ್ನೈ: ತಮ್ಮ ಸಂಸ್ಥೆಯ ಕಳಪೆ ಔಷಧಿಗಳನ್ನೇ ರೋಗಿಗಳಿಗೆ ಬರೆದು ಕೊಡುವಂತೆ ಅಮೆರಿಕ ಮೂಲದ ಔಷಧ ತಯಾರಿಕಾ ಸಂಸ್ಥೆಗಳು ಬೆದರಿಕೆ ಹಾಕುತ್ತಿವೆ ಎಂದು ಆರೋಪಿಸಿ ದಕ್ಷಿಣ ಭಾರತದ ಖ್ಯಾತ ನಟ ಬಾಹುಬಲಿ ಕಟ್ಟಪ್ಪ  ಖ್ಯಾತಿಯ ಸತ್ಯರಾಜ್ ಪುತ್ರಿ ದಿವ್ಯಾ ಸತ್ಯರಾಜ್ ಅವರು ಪ್ರಧಾನಿ ಮೋದಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

ದಿವ್ಯಾ ಸತ್ಯರಾಜ್ ಅವರು ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಪೌಷ್ಟಿಕಾಂಶಗಳ ತಜ್ಞರಾಗಿದ್ದಾರೆ. ಇತ್ತೀಚೆಗೆ ಅಮೆರಿಕ ಮೂಲಕ ಔಷಧ ತಯಾರಿಕಾ ಸಂಸ್ಥೆಯೊಂದು ದಿವ್ಯಾ ಅವರನ್ನು ಸಂಪರ್ಕಿಸಿ ತಮ್ಮ ರೋಗಿಗಳಿಗೆ ತಮ್ಮ ಸಂಸ್ಥೆ  ತಯಾರಿಸುವ ಔಷಧಿಗಳನ್ನೇ ಬರೆದು ಕೊಡುವಂತೆ ಕೇಳಿತ್ತು. ಆದರೆ ಆ ಔಷಧಿಗಳನ್ನು ಪರೀಕ್ಷಿಸಿದಾಗ ಅವುಗಳಲ್ಲಿ ವಿಷಕಾರಿ ರಾಸಾಯನಿಕಗಳಿರುವುದು ಪತ್ತೆಯಾಗಿತ್ತು. ಔಷಧಗಳಲ್ಲಿ ಸ್ಟಿರಾಯ್ಡ್ ಗಳನ್ನು ಬಳಕೆ ಮಾಡಲಾಗಿದ್ದು,  ಇವುಗಳಲ್ಲಿರುವ ರಾಸಾಯನಿಕಗಳಿಂದ ಮನುಷ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೀರ್ಘಕಾಲಿಕವಾಗಿ ಈ ಔಷಧಿಗಳ ಬಳಕೆಯಿಂದ ದೃಷ್ಟಿ ಹೀನತೆ, ಪಿತ್ತಕೋಶ. ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೆ  ಗಂಭೀರ ಪರಿಣಾಮಬೀರುತ್ತವೆ. ಹೀಗಾಗಿ ಇವುಗಳನ್ನು ರೋಗಿಗಳಿಗೆ ಬರೆದು ಕೊಡಲು ನಿರಾಕರಿಸಿದ್ದೆ.

ಬಳಿಕ ಆ ಸಂಸ್ಥೆಗಳ ಪ್ರತಿನಿಧಿಗಳು ತಮಗೆ ಹಣದ ಆಮಿಷ ಒಡ್ಡಿದರು. ಇದಕ್ಕೆ ನಾನು ನಿರಾಕರಿಸಿದಾಗ ಪ್ರಾಣ ಬೆದರಿಕೆ ಹಾಕಿದ್ದಾರೆ. ತಮಗೆ ಇಲ್ಲಿನ ಪ್ರಭಾವಿ ರಾಜಕೀಯ ನಾಯಕರ ಸಂಪರ್ಕವಿದ್ದು, ಬಹುತೇಕ ಪ್ರಮುಖ  ವೈದ್ಯಕೀಯ ಸಂಸ್ಥೆಗಳೂ ಕೂಡ ನಮ್ಮ ಹಿಂದಿದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ವೈದ್ಯೆ ದಿವ್ಯಾ ತಮ್ಮ ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಆಂತೆಯೇ ಔಷಧ ಮಾಫಿಯಾದ ಕರಾಳ ಮುಖದ ಪರಿಚಯ ಮಾಡಿಸಿರುವ ವೈದ್ಯೆ ದಿವ್ಯಾ ಅವರು, ಭಾರತೀಯ ವೈದ್ಯಕೀಯ ಲೋಕದ ಲೋಪದೋಷಗಳನ್ನೂ ಜಗಜ್ಜಾಹೀರು ಮಾಡಿದ್ದಾರೆ. ಇಲ್ಲಿ ರೋಗಿಗಳನ್ನು ಆಸ್ಪತ್ರೆಗಳು  ಆದಾಯ ಉತ್ಪಾದನೆಯ ಯಂತ್ರಗಳಂತೆ ಪರಿಗಣಿಸುತ್ತಿವೆ. ರಕ್ತ ಪರೀಕ್ಷೆ ಮಾಡಿಸಿದರೆ ಸಾಕಾಗುವ ಪರಿಸ್ಥಿತಿಗಳಲ್ಲಿ ಎಂಆರ್ ಐ ಸ್ಕ್ಯಾನ್ ಯಂತಹ ದುಬಾರಿ ಪರೀಕ್ಷೆಗಳನ್ನು ಮಾಡಿಸಲಾಗುತ್ತಿದೆ. ನನ್ನ ಅನೇಕ ವಿದೇಶಿ ವೈದ್ಯ  ಸ್ನೇಹಿತರು ಭಾರತೀಯ ವೈದ್ಯರು ಔಷಧಿಗಳ ವೈಜ್ಞಾನಿಕ ಅಂಶಗಳನ್ನು ಪರಿಗಣಿಸದೇ ಔಷಧಿಗಳನ್ನೂ ನೀಡುತ್ತಾರೆ ಎಂದು ಆರೋಪಿಸುತ್ತಾರೆ.

ಭಾರತೀಯ ರೋಗಿಗಳು ಆಸ್ಪತ್ರೆಗಳ ಆದಾಯ ಉತ್ಪಾದನೆಯ ಯಂತ್ರಗಳೇ..ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲವೇ? ನಮ್ಮ ದೇಶದ ಮಧ್ಯಮವರ್ಗದ ಪ್ರಜೆಗಳನ್ನು ಈ ಅಪಾಯಕಾರಿ ಔಷಧಿಗಳಿಂದ ರಕ್ಷಿಸುವವರು ಯಾರು?  ಮಧುರೈ ನ ಆಸ್ಪತ್ರೆಯಲ್ಲಿ ಸಂಪೂರ್ಣ ಗುಣಮುಖಳಾಗಿರುವ ಓರ್ವ ಹೆಣ್ಣು ಮಗಳು ಇಂದಿಗೂ ಚಿಕಿತ್ಸೆ ಪಡೆಯುತ್ತಿರುವುದು ಏಕೆ? ದುಬಾರಿ ಶುಲ್ಕ ಪಾವತಿ ಮಾಡಲು ಸಾಧ್ಯವಿಲ್ಲ ಎಂದ ಮಾತ್ರಕ್ಕೆ ಬಡ ಬುದ್ಧಿವಂತ ವಿದ್ಯಾರ್ಥಿಗೆ  ಪ್ರವೇಶ ನಿರಾಕರಿಸುತ್ತಿರುವುದೇಕೆ? ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಕೇವಲ ಹಣವೊಂದೇ ಮಾನದಂಡವೇ ಅಥವಾ ಉತ್ತಮ ಬಡ ಬುದ್ಧಿವಂತ ವಿದ್ಯಾರ್ಥಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಅನರ್ಹನೇ ಎಂದು ದಿವ್ಯಾ ತಮ್ಮ ಪತ್ರದಲ್ಲಿ  ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com