1944ರಲ್ಲಿ ಮಹಾತ್ಮ ಗಾಂಧೀಜಿಯ ಜೀವ ಉಳಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಭಿಲಾರೆ ನಿಧನ

1944ರಲ್ಲಿ ಮಹಾತ್ಮ ಗಾಂಧೀಜಿ ಅವರ ಪ್ರಾಣ ಉಳಿಸಿದ್ದ ಹಿರಿಯ ಸ್ವಾತಂತ್ರ ಹೋರಾಟಗಾರ ಭಿಕು ದಾಜಿ ಭಿಲಾರೆ(98 ವರ್ಷ) ಬುಧವಾರ ಮಹಾರಾಷ್ಟ್ರದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ವಾತಂತ್ರ ಹೋರಾಟಗಾರ ಭಿಕು ದಾಜಿ ಭಿಲಾರೆ (ಸಂಗ್ರಹ ಚಿತ್ರ)
ಸ್ವಾತಂತ್ರ ಹೋರಾಟಗಾರ ಭಿಕು ದಾಜಿ ಭಿಲಾರೆ (ಸಂಗ್ರಹ ಚಿತ್ರ)

ನವದೆಹಲಿ: 1944ರಲ್ಲಿ ಮಹಾತ್ಮ ಗಾಂಧೀಜಿ ಅವರ ಪ್ರಾಣ ಉಳಿಸಿದ್ದ ಹಿರಿಯ ಸ್ವಾತಂತ್ರ ಹೋರಾಟಗಾರ ಭಿಕು ದಾಜಿ ಭಿಲಾರೆ(98 ವರ್ಷ) ಬುಧವಾರ ಮಹಾರಾಷ್ಟ್ರದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

98 ವರ್ಷ ವಯಸ್ಸಿನ ಭಿಲಾರೆ ಅವರು ವಯೋ ಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ನಿನ್ನೆ ಅವರು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. 1919ರ ನವೆಂಬರ್ 28ರಂದು ಜನಿಸಿದ್ದ ಭಿಲಾರೆ ಅವರು, ಮೂರು ಮಕ್ಕಳನ್ನು ಅಗಲಿದ್ದಾರೆ. ಭಿಲಾರೆ ಅವರ ಅಂತ್ಯಕ್ರಿಯೆಯಲ್ಲಿ ಸ್ವಾತಂತ್ರ ಹೋರಾಟಗಾರರು ಹಾಗೂ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.

ಇನ್ನು ಭಿಲಾರೆ ನಿಧನಕ್ಕೆ ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್ ಗಾಂಧಿ ಸಹಿತ ಹಲವು ಉನ್ನತ ಕಾಂಗ್ರೆಸ್ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ. "ಎರಡು ಬಾರಿ ಮಹಾಬಲೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಭಿಲಾರೆ  ಸದಾ ಕಾಲ ಸಾಮಾಜಿಕ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಸ್ವಾತಂತ್ರ ಹೋರಾಟಗಾರರ ಹಕ್ಕು ಹಾಗೂ ಬೇಡಿಕೆಗಳಿಗಾಗಿ ಸದಾ ಕಾಲ ಹೋರಾಟ ನಡೆಸಿದ್ದರು. ಕಳೆದ ಕೆಲವು ವರ್ಷಗಳಿಂದ ತಮ್ಮ  ಹಳ್ಳಿಯಲ್ಲೇ ನೆಲೆಸಿದ್ದರು'' ಎಂದು ಭಿಲಾರೆ ಅವರ ಆತ್ಮೀಯ ಗೆಳೆಯ, ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ರತ್ನಾಕರ್ ಮಹಾಜನ್ ಹೇಳಿದ್ದಾರೆ.

ಇನ್ನು ಭಿಲಾರೆ ಅವರು ಮಹಾತ್ಮ ಗಾಂಧಿ ಅವರ ಪ್ರಾಣ ಉಳಿಸಿದ್ದರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಒಂದೇ ದಾಖಲೆಗಳಿಲ್ಲ ಗಾಂಧಿ ಅವರ ಮೊಮ್ಮಗ ತುಷಾರ್ ಗಾಂಧಿ ತಮ್ಮ ಹೊಸ ಪುಸ್ತಕವೊಂದರಲ್ಲಿ ಹೇಳಿಕೊಂಡಿದ್ದರು.

ಮಹಾತ್ಮ ಗಾಂಧಿ ಪ್ರಾಣ ಉಳಿಸಿದ್ದ ಭಿಲಾರೆ
ಇನ್ನು 1944ರಲ್ಲಿ ಒಮ್ಮೆ ನಾಥೂರಾಮ್ ಗೋಡ್ಸೆ ಮಹಾತ್ಮ ಗಾಂಧೀಜಿಯವರನ್ನು ಚಾಕುವಿನಿಂದು ಇರಿದು ಹತ್ಯೆಗೈಯ್ಯಲು ಪ್ರಯತ್ನಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಇದೇ ಭಿಲಾರೆ ಅವರು ಗಾಂಧಿಜಿ ಅವರ ಪ್ರಾಣ ಉಳಿಸಿದ್ದರು.  ಗೋಡ್ಸೆ, ಗಾಂಧೀಜಿಯನ್ನು ಹತ್ಯೆಗೈಯ್ಯಲು ಆರು ಬಾರಿ ಪ್ರಯತ್ನಿಸಿದ್ದು, 1944ರಲ್ಲಿ ಮಹಾರಾಷ್ಟ್ರದ ಪಂಚಗನಿಯಲ್ಲಿ ಭಿಲಾರೆ ಅವರು ಗಾಂಧೀಜಿಯ ಜೀವವನ್ನು ಉಳಿಸಿದ್ದರು.

1944ರ ಜುಲೈನಲ್ಲಿ ಪುಣೆಯ ಆಗಾ ಖಾನ್ ಪ್ಯಾಲೇಸ್ ಜೈಲಿನಿಂದ ಬಿಡುಗಡೆಯಾಗಿದ್ದ ಗಾಂಧೀಜಿಯವರು ಚೇತರಿಸಿಕೊಳ್ಳಲು ಪಂಚಗನಿಗೆ ತೆರಳಿದ್ದರು. ಗಾಂಧೀಜಿಯವರು ಒಂದು ಸಂಜೆ ಶಾಲೆ ಸಮೀಪ ಪ್ರಾರ್ಥನಾ ಸಭೆಯಲ್ಲಿ  ಪಾಲ್ಗೊಂಡಿದ್ದ ಸಂದರ್ಭದಲ್ಲಿ ಗೋಡ್ಸೆ, ತನ್ನ ಇಬ್ಬರು ಸಹಚರರೊಂದಿಗೆ ಗಾಂಧೀಜಿಗೆ ಚೂರಿಯಿಂದ ಇರಿಯಲು ಮುಂದಾಗಿದ್ದ. ಇದನ್ನು ತಕ್ಷಣವೇ ಗಮನಿಸಿದ ಭಿಲಾರೆ, ಗೋಡ್ಸೆಯ ಹಾದಿಗೆ ಅಡ್ಡಲಾಗಿ ನಿಂತಿದ್ದಲ್ಲದೆ ಆತನ  ಕೈಯಲ್ಲಿದ್ದ ಚೂರಿಯನ್ನು ಕಸಿದುಕೊಂಡಿದ್ದರು ಎಂದು ತಜ್ಞರಾದ ಮಹಾಜನ್ ಹಳೆಯ ಘಟನೆ ನೆನಪಿಸಿಕೊಂಡಿದ್ದರು. ಗೋಡ್ಸೆ 1948ರಲ್ಲಿ ದೆಹಲಿಯ ಬಿರ್ಲಾ ಹೌಸ್‌ನಲ್ಲಿ ಗಾಂಧೀಜಿಯ ಹತ್ಯೆ ನಡೆಸಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com