

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೇಘಸ್ಫೋಟ ಸಂಭವಿಸಿದ ಪರಿಣಾಮ ಭಾರಿ ಮಳೆಯಾಗುತ್ತಿದ್ದು, ಈ ವರೆಗೂ ಕನಿಷ್ಠ ಮೂರು ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾಶ್ಮೀರದ ಡೋಡಾ ಜಿಲ್ಲೆಯಲ್ಲಿ ಮೇಘಸ್ಫೋಟವಾಗಿದ್ದು, ಪರಿಣಾಮ ಭಾರಿ ಪ್ರಮಾಣದ ಸತತ ಮಳೆಯಾಗುತ್ತಿದೆ. ಡೋಡಾದ ತಾತ್ರಿ ಪಟ್ಟಣ ಇದೀಗ ಸಂಪೂರ್ಣ ಪ್ರವಾಹಕ್ಕೆ ನಲುಗಿ ಹೋಗಿದ್ದು, ಬಟೋಟೆ-ಕಿಶ್ತ್ ವಾರ್ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಪ್ರವಾಹದಿಂದಾಗಿ ಕನಿಷ್ಠ 12 ಮನೆಗಳು ಕೊಚ್ಚಿ ಹೋಗಿದ್ದು, ಹತ್ತಾರು ಮಂದಿ ನೀರಿನಲ್ಲಿ ಅಪಾಯಕ್ಕೆ ಸಿಲುಕಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಈ ವರೆಗೂ ಸೇನಾಪಡೆಗಳು 12 ವರ್ಷದ ಓರ್ವ ಬಾಲಕ ಸೇರಿದಂತೆ 12 ಮಂದಿಯನ್ನು ರಕ್ಷಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ತಾತ್ರಿ ಪಟ್ಟಣದಲ್ಲಿ ರಾತ್ರಿ ಸುಮಾರು 2 ಗಂಟೆಯಿಂದಲೇ ಪ್ರವಾಹ ಉಂಟಾಗಿದ್ದು, ಹತ್ತಾರು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇನ್ನು ತಾತ್ರಿಯಲ್ಲಿ ಪ್ರಹಾಹಕ್ಕೆ ಸಿಲುಕಿ ಈ ವರೆಗೂ ಮೂವರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ.
ಇಡೀ ಜಿಲ್ಲೆಯಾದ್ಯಂತ ಸೇನೆ ಮತ್ತು ಪೊಲೀಸರು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಸಮಯ ಕಳೆದಂತೆ ನೀರನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.