ಮುಂಬೈ: ತಮ್ಮ ಫೋಟೋವನ್ನು ಹಾಕಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಪಹಾಸ್ಯ ಮಾಡಿದ್ದ ಮುಂಬೈ ಮೂಲದ ಎಐಬಿ ತಂಡದ ವಿರುದ್ಧ ಮೋದಿ ತದ್ರೂಪಿ ರಾಮಚಂದ್ರನ್ ಅವರು ಕಿಡಿಕಾರಿದ್ದಾರೆ.
ಇತ್ತೀಚಿನ ವಿವಾದಿತ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಣ್ಣೂರು ಮೂಲದ ರಾಮಚಂದ್ರನ್ ಅವರು, ಹಣಕಾಸಿನ ಲಾಭಕ್ಕಾಗಿ ತಿರುಚಿದ ಫೋಟವನ್ನು ಬಳಸಿಕೊಳ್ಳಲು ಯಾರಿಗೂ ಹಕ್ಕಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಂತರಾಷ್ಟ್ರೀಯ ಖ್ಯಾತಿಯ ವ್ಯಕ್ತಿ ಮತ್ತು ನನ್ನ ಆದರ್ಶ ಪುರುಷ ಕೂಡ ಹೌದು. ದೇಶಕ್ಕಾಗಿ ಅಷ್ಟೊಂದು ಸೇವೆ ಸಲ್ಲಿಸುತ್ತಿರುವವರ ಬಗ್ಗೆ ಬಗ್ಗೆ ಯಾರೊಬ್ಬರೂ ತಮಾಷೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಪಯ್ಯನೂರು ನಿಲ್ದಾಣದಲ್ಲಿ ಜು.10 ರಂದು ಈ ಫೋಟೋವನ್ನು ಕೆಲ ಪ್ರಯಾಣಿಕರು ತೆಗೆದಿದ್ದರು. ಮೋದಿಯವರಂತೆ ಕಾಣುತ್ತೇನೆಂದು ಹೇಳುವ ಜನರು ರಸ್ತೆಯಲ್ಲಿ ಹೋಗುತ್ತಿದ್ದಾಗ ಸಾಮಾನ್ಯವಾಗಿ ನನ್ನೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತಿರುತ್ತಾರೆ. ಇದು ನನಗೆ ಸಾಮಾನ್ಯವಾಗಿ ಹೋಗಿದೆ ಎಂದು ತಿಳಿಸಿದ್ದಾರೆ.
ಸ್ನಾಪ್ ಚಾಟ್ ನಲ್ಲಿ ಪ್ರಧಾನಿ ಮೋದಿಯವರ ಮುಖವನ್ನು ನಾಯಿ ಚಿತ್ರದಂತೆ ತಿರುಚಿರುವ ಫೋಟೋದ ಜೊತೆಗೆ, ಪ್ರಧಾನಿಯಂತೆಯೇ ಕಾಣುವ ವ್ಯಕ್ತಿಯೊಬ್ಬರು ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತ ನಿಂತಿರುವ ಚಿತ್ರವನ್ನು ಎಐಬಿ ಈ ಹಿಂದೆ ಪೋಸ್ಟ್ ಮಾಡಿತ್ತು.
ಎಐಬಿ ಈ ಪೋಸ್ಟ್ ಹಾಕುತ್ತಿದ್ದಂತೆಯೇ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದರು, ಅಲ್ಲದೆ, ಎಐಬಿ ವಿರುದ್ಧ ಸಾಕಷ್ಟು ಟೀಕೆಗಳನ್ನು ವ್ಯಕ್ತಪಡಿಸಲು ಆರಂಭಿಸಿದ್ದರು. ಇದರಿಂದ ತೀವ್ರ ಮುಜುಗರಕ್ಕೊಳಗಾಗಿದ್ದ ಎಐಬಿ, ಪೋಸ್ಟ್ ಅನ್ನೇ ತೆಗೆದು ಹಾಕಿತ್ತು.