ಹಿಂದಿಯೇತರ ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯಿಲ್ಲ: ಕಿರೆಣ್ ರಿಜಿಜು

ಪ್ರಾದೇಶಿಕ ಭಾಷೆಗಳನ್ನು ಬದಿಗೊತ್ತಿ ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುವ ಉದ್ದೇಶ ಕೇಂದ್ರ ಸರ್ಕಾರಕ್ಕಿಲ್ಲ ಎಂದು ಶುಕ್ರವಾರ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು (ಸಂಗ್ರಹ ಚಿತ್ರ)
ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು (ಸಂಗ್ರಹ ಚಿತ್ರ)

ನವದೆಹಲಿ: ಪ್ರಾದೇಶಿಕ ಭಾಷೆಗಳನ್ನು ಬದಿಗೊತ್ತಿ ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುವ ಉದ್ದೇಶ ಕೇಂದ್ರ ಸರ್ಕಾರಕ್ಕಿಲ್ಲ ಎಂದು ಶುಕ್ರವಾರ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು ಸ್ಪಷ್ಟನೆ ನೀಡಿದ್ದಾರೆ.

ಹಿಂದಿ ಹೇರಿಕೆ ಬಗ್ಗೆ ಕರ್ನಾಟಕ, ತಮಿಳುನಾಡಿನಲ್ಲಿ ಸಾಕಷ್ಟು ವಿರೋಧ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ  ಶುಕ್ರವಾರ ಸಂಸತ್ ಕಲಾಪದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಸ್ಪಷ್ಟನೆ ನೀಡಿದ ಕೇಂದ್ರ ಸಚಿವ ಕಿರೆಣ್ ರಿಜಿಜು ಅವರು,  ಪ್ರಾದೇಶಿಕ ಭಾಷೆಗಳನ್ನು ಬದಿಗೊತ್ತಿ ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುವ ಉದ್ದೇಶ ಕೇಂದ್ರ ಸರ್ಕಾರಕ್ಕಿಲ್ಲ. ಪ್ರತಿಯೊಂದು ಭಾಷೆಯನ್ನೂ ನಾವು ಗೌರವಿಸುತ್ತೇವೆ ಮತ್ತು ಅವುಗಳ ಮಹತ್ವದ ಬಗ್ಗೆಯೂ ನಮಗೆ  ಅರಿವಿದೆ ಎಂದು ಹೇಳಿದ್ದಾರೆ.

ರಾಜ್ಯಸಭೆ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಕರ್ನಾಟಕದ ತುಳು ಮತ್ತು ಕೊಡವ ಭಾಷೆಗೆ ಸಂವಿಧಾನ ಮಾನ್ಯತೆ ನೀಡಬೇಕು, ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಈ ಭಾಷೆಗಳನ್ನು ಸೇರಿಸಬೇಕು ಎಂದು ಖಾಸಗಿ ಮಸೂದೆ  ಮಂಡಿಸಿದ್ದರು. ಈ ಮಸೂದೆ ಕುರಿತ ಚರ್ಚೆ ವೇಳೆ ಕೇಂದ್ರ ಸಚಿವ ರಿಜಿಜು ಮಾತನಾಡಿ, ಹಿಂದಿ ದೇಶದ ಅಧಿಕೃತ ಭಾಷೆಯಾಗಿದ್ದರೂ, ಎಲ್ಲ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ ಆಗಿವೆ. ಸಂವಿಧಾನ ಮಾನ್ಯತೆ ಕೋರಿರುವ 38  ಭಾಷೆಗಳಿಗೆ ಮಾನ್ಯತೆ ನೀಡುವ ಕುರಿತು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಹಿಂದಿಗೆ ಹೆಚ್ಚು ಪ್ರಾಶಸ್ತ್ಯ ನೀಡುವ ಅಥವಾ ನಿರ್ದಿಷ್ಟ ಭಾಷೆಯನ್ನು ಶೋಷಿಸುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ ಎಂದು ಅವರು  ಹೇಳಿದರು.

ಇದೇ ವೇಳೆ ದೇಶದಲ್ಲಿ ತ್ರಿಭಾಷಾ ಸೂತ್ರ ಈಗಾಗಲೇ ಅಸ್ತಿತ್ವದಲ್ಲಿದೆ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ವ್ಯವಹಾರ ನಡೆಸುವುದಕ್ಕೂ ನಾವು ಕಡಿವಾಣ ಹಾಕಿಲ್ಲ ಎಂದು ಹೇಳಿದ ರಿಜಿಜು, ಭಾಷೆ ಸೂಕ್ಷ್ಮ ವಿಷಯವಾಗಿದ್ದು, ನಮ್ಮ  ಉದ್ದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಲ್ಲಿ ಅನಗತ್ಯ ವಿವಾದ ಸೃಷ್ಟಿಯಾಗಬಹುದು. ಹಿಂದಿ ಭಾಷೆ ಬೆಳೆಸುವ ಜತೆಗೆ ಇತರೆ ಪ್ರಾದೇಶಿಕ ಭಾಷೆಗಳನ್ನೂ ಉತ್ತೇಜಿಸಬೇಕು ಎಂದರು.

ಸರ್ಕಾರಕ್ಕೆ ಬಿಕೆ ಹರಿಪ್ರಸಾದ್ ಸವಾಲು!
ಈ ಮಧ್ಯೆ ಮಾತನಾಡಿದ ಹರಿಪ್ರಸಾದ್, ‘ದಕ್ಷಿಣ ಭಾರತದಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸುವ ಕ್ರಮಕ್ಕೆ ನಮ್ಮ ವಿರೋಧವಿಲ್ಲ. ಆದರೆ ದಕ್ಷಿಣ ಭಾರತದ ಒಂದು ಭಾಷೆಯನ್ನು ಉತ್ತರ ಭಾರತದಲ್ಲೂ ಕಡ್ಡಾಯಗೊಳಿಸುತ್ತೀರಾ?’  ಎಂದು ಸವಾಲು ಹಾಕಿದರು. ಪ್ರಾದೇಶಿಕ ಭಾಷೆಗಳಿಗೆ ಸಂವಿಧಾನ ಮಾನ್ಯತೆ ನೀಡಲು ರಾಜಕೀಯ ಅಡ್ಡಿಯಾಗಬಾರದು. ಕೇಂದ್ರ ಸರ್ಕಾರ ಸೂಕ್ತ ಮಾರ್ಗವೊಂದನ್ನು ಕಂಡುಕೊಂಡು ಭಾಷೆಗಳನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು.  ತುಳು ಮತ್ತು ಕೊಡವ ಭಾಷೆಗಳು ಮಾನ್ಯತೆಗಾಗಿ ದಶಕಗಳಿಂದ ಕಾದು ಕುಳಿತಿವೆ ಎಂದರು.

ಇದಕ್ಕೆ ಉತ್ತರಿಸಿದ ಕೇಂದ್ರ ಸಚಿವ ರಿಜಿಜು, 8ನೇ ಪರಿಚ್ಛೇದಕ್ಕೆ ನಿರ್ದಿಷ್ಟ ಭಾಷೆ ಸೇರ್ಪಡೆಗೊಳಿಸುವ ಮಾನದಂಡಗಳನ್ನು ವ್ಯಾಖ್ಯಾನಿಸುವುದು ಸುಲಭವಲ್ಲ. ಪ್ರಾದೇಶಿಕ ಭಾಷೆಗಳ ಬೇಡಿಕೆ ಪರಿಗಣಿಸಲು ಕೇಂದ್ರ ಸರ್ಕಾರ ಸಮಿತಿ  ರಚನೆ ಮಾಡಲಿದೆ. ನೀವು ಹೇಳಿದ 2 ಭಾಷೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಖಾಸಗಿ ಸದಸ್ಯ ಮಸೂದೆಯನ್ನು ಹಿಂತೆಗೆದುಕೊಳ್ಳಿ ಎಂದು ಹರಿಪ್ರಸಾದ್ ಗೆ ಸಲಹೆ ನೀಡಿದರು. ಸದ್ಯ ದೇಶದ 22  ಭಾಷೆಗಳು 8ನೇ ಪರಿಚ್ಛೇದ ವ್ಯಾಪ್ತಿಯಲ್ಲಿದ್ದು, 38 ಭಾಷೆಗಳನ್ನು ಸಂವಿಧಾನದ ವ್ಯಾಪ್ತಿಗೆ ತರಬೇಕು ಎಂಬ ಒತ್ತಾಯ ಕೇಂದ್ರ ಸರ್ಕಾರದ ಮುಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com