ಭಯೋತ್ಪಾದನೆಗೆ ಆರ್ಥಿಕ ನೆರವು: ಪ್ರತ್ಯೇಕತಾವಾದಿ ಗಿಲಾನಿ ಅಳಿಯ ಸೇರಿ 7 ಮಂದಿ ಬಂಧನ!

ಉಗ್ರರಿಗೆ ಹಣಕಾಸಿನ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ ಐಎ 7 ಮಂದಿ ಹುರಿಯತ್ ನಾಯಕರನ್ನು ಸೋಮವಾರ ಬಂಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಉಗ್ರರಿಗೆ ಹಣಕಾಸಿನ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ ಐಎ 7  ಮಂದಿ ಹುರಿಯತ್ ನಾಯಕರನ್ನು ಸೋಮವಾರ ಬಂಧಿಸಿದೆ.

ಪ್ರಮುಖ ವಿಚಾರವೆಂದರೆ ಇಂದು ಬಂಧನಕ್ಕೀಡಾದ ಹುರಿಯತ್ ನಾಯಕರ ಪೈಕಿ ಪ್ರತ್ಯೇಕತಾವಾದಿ ಮುಖಂಡ ಗಿಲಾನಿ ಅಳಿಯ ಅಲ್ತಾಫ್ ಕೂಡ ಸೇರಿದ್ದು, ಇದಲ್ಲದೆ ಹುರಿಯತ್ ಧುರೀಣರಾದ ಶಹೀದ್  ಉಲ್ ಇಸ್ಲಾಂ, ಬಿಟ್ಟೂ  ಕರಾಟೆ, ನಯೀಂ ಖಾನ್ ಸೇರಿದಂತೆ ಒಟ್ಟು 5 ಮಂದಿ ನಾಯಕರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಎನ್ ಐಎ ಅಧಿಕಾರಿಗಳು ತಿಳಿಸಿರುವಂತೆ ಮುಂಜಾಗ್ರತಾ ಕ್ರಮವಾಗಿ ಈ ಐದು ಮುಖಂಡರನ್ನು ಬಂಧನಕ್ಕೊಳಪಡಿಸಲಾಗಿದ್ದು, ಈ ಹಿಂದೆ ವಿಚಾರಣೆ ಕುರಿತಂತೆ ಅಧಿಕೃತ ಮನವಿ ಮಾಡಲಾಗಿತ್ತು. ಅದರಂತೆ ಎರಡೆರಡು ಬಾರಿ  ಆರೋಪಿಗಳಿಗೆ ಸಮನ್ಸ್ ಕೂಡ ಜಾರಿ ಮಾಡಲಾಗಿತ್ತು. ತೆಹ್ರೀಕ್ ಇ ಹುರಿಯತ್ ಸಂಘಟನೆಯ ವಕ್ತಾರರಾದ ಅಯಾಜ್ ಅಕ್ಬರ್, ರಾಜಾ ಮಿರಾಜುದ್ದೀನ್ ಕಲ್ವಾಲ್, ಹಿರಿಯ ಪ್ರತ್ಯೇಕತಾವಾದಿ ಮುಖಂಡ ಹಾಗೂ ಸೈಯ್ಯದ್ ಅಲಿ ಶಾ  ಗಿಲಾನಿ ಅಳಿಯ ಅಲ್ತಾಫ್ ಫಂತೋಷ್,  ಗಿಲಾನಿ ಆಪ್ತ ಪೀರ್ ಸೈಫುಲ್ಲಾ ಗೆ ಜುಲೈ 14 ಮತ್ತು 17ರಂದು ಸಮನ್ಸ್ ಜಾರಿ ಮಾಡಲಾಗಿತ್ತು.

ಆದರೆ ಮನವಿ ಹೊರತಾಗಿಯೂ ಅವರು ವಿಚಾರಣೆಗೆ ಗೈರು ಹಾಜರಿಯಾದ್ದರಿಂದ ಇಂದು ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಎಲ್ಲ ಆರೋಪಿಗಳು ಜಮ್ಮು ಮತ್ತು ಕಾಶ್ಮೀರ ಪೊಲೀಸರ  ವಶದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಂಧನ ಅನಿವಾರ್ಯವಾಗಿತ್ತು: ಗೃಹ ಇಲಾಖೆ ಸ್ಪಷ್ಟನೆ
ಇನ್ನು ಹುರಿಯತ್ ಮುಖಂಡರ ಬಂಧನ ಕುರಿತಂತೆ ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ ನೀಡಿದ್ದು, ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗೆ ಕುಮ್ಮಕ್ಕು ನೀಡುವ ಮತ್ತು ಹಿಂಸೆಗೆ ಪ್ರಚೋದನೆ ನೀಡುವ ದೊಡ್ಡ ಪಿತೂರಿಯಲ್ಲಿ ಇವರ ಕೈವಾಡದ  ಕುರಿತು ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಅಲ್ಲದೆ ಪಾಕಿಸ್ತಾನ ಹಣ ಹಂಚಿಕೆಯಾದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಕಳೆದ ತಿಂಗಳಷ್ಟೇ ಈ ಬಗ್ಗೆ ಪ್ರಮುಖ ದಾಖಲೆಗಳು ಪತ್ತೆಯಾಗಿತ್ತು. ಹೀಗಾಗಿ ಬಂಧಿಸಲಾಗಿದೆ ಎಂದು ಸ್ಪಷ್ಟನೆ  ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com