
ಲಖನೌ: ಗುಜರಾತ್ ನಲ್ಲಿ ಆರು ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆ ವಿಚಾರ ಹಸಿರಾಗಿರುವಂತೆಯೇ ಇದೀಗ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಇಬ್ಬರು ಹಾಗೂ ಬಿಎಸ್ ಪಿ ಯ ಓರ್ವ ಶಾಸಕ ತಮ್ಮ ಪಕ್ಷಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಸಮಾಜವಾದಿ ಪಕ್ಷದ ಎಂಎಲ್ ಸಿಗಳಾದ ಯಶವಂತ ಸಿಂಗ್ ಮತ್ತು ಬುಕ್ಕಾಲ್ ನವಾಬ್ ಹಾಗೂ ಬಹುಜನ ಸಮಾಜವಾದಿ ಪಕ್ಷದ ಠಾಕೂರ್ ಜೈವೀರ್ ಸಿಂಗ್ ಅವರು ತಮ್ಮ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ಸಮಾಜವಾದಿ ಪಕ್ಷ ತೊರೆದಿದ್ದ ಬುಕ್ಕಾಲ್ ನವಾಬ್ ಅವರು ರಾಷ್ಟ್ರೀಯ ಶಿಯಾ ಸಮಾಜದ ಸ್ಥಾಪಕರಾಗಿದ್ದಾರೆ ಎಂದು ತಿಳಿದುಬಂದಿದೆ.
ರಾಜಿನಾಮೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಶ್ಲಾಘಿಸುವ ಮೂಲಕ ಶಾಸಕರು ಬಿಜೆಪಿ ಪಕ್ಷ ಸೇರುವ ಮುನ್ಸೂಚನೆ ನೀಡಿದ್ದಾರೆ. ಇನ್ನು ಸಮಾಜವಾದಿ ಪಕ್ಷದ ಮತ್ತೋರ್ವ ಮುಖಂಡ ಮಧುಕರ್ ಜೇಟ್ಲಿ ಅವರೂ ಕೂಡ ಈ ಹಿಂದೆ ರಾಜಿನಾಮೆ ಸಲ್ಲಿಕೆ ಮಾಡಿದ್ದರು. ಆದರೆ ಅವರೊಂದಿಗೆ ಸಂಧಾನ ನಡೆಸಿದ್ದ ಸಮಾಜವಾದಿ ಪಕ್ಷದ ಮುಖಂಡ ಶಿವಪಾಲ್ ಯಾದವ್ ರಾಜಿನಾಮೆ ಹಿಂಪಡೆಯುವಂತೆ ಸಲಹೆ ನೀಡಿದ್ದರು. ಶಿವಪಾಲ್ ಯಾದವ್ ಜೊತೆಗಿನ ಸಂಧಾನದ ಫಲವಾಗಿ ಮಧುಕರ್ ಜೇಟ್ಲಿ ರಾಜಿನಾಮೆಯನ್ನು ಹಿಂಪಡೆದಿದ್ದರು ಎಂದು ತಿಳಿದುಬಂದಿದೆ.
"ಇದು ರಾಜಕೀಯ ಭ್ರಷ್ಟಾಚಾರ": ಪಕ್ಷಾಂತರ ಶಾಸಕರ ವಿರುದ್ಧ ಅಖಿಲೇಶ್ ಗುಡುಗು
ಇದೇ ವೇಳೆ ಪಕ್ಷಾಂತರಿ ಶಾಸಕರ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು, ಇದು ರಾಜಕೀಯ ಭ್ರಷ್ಟಾಚಾರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಹಾರ ಮತ್ತು ಗುಜರಾತ್ ನಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿದ್ದನ್ನು ನಾವು ಗಮನಿಸಿದ್ದೇವೆ. ಇದೀಗ ಉತ್ತರ ಪ್ರದೇಶದಲ್ಲೂ ಬಿಜೆಪಿ ಪಕ್ಷ ತನ್ನ ಛಾಳಿಯನ್ನು ಮುಂದುವರೆಸಿದೆ. ಉತ್ತರ ಪ್ರದೇಶದ ಜನ ಪ್ರತಿಯೊಂದನ್ನೂ ಗಮನಿಸುತ್ತಿದ್ದು, ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡುತ್ತಾರೆ. ಡಿಎನ್ ಎ ಬಗ್ಗೆ ಮಾತನಾಡುತ್ತಿದ್ದ ಜನ ಇದೀಗ ಎನ್ ಡಿಎಗೆ ಹೋಗಿದ್ದಾರೆ. ಇದು ಅವರ ನೈತಿಕತೆಯ ಪ್ರಶ್ನೆಯಾಗಿದೆ ಎಂದು ಅಖಿಲೇಶ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement