
ಕಾಸರಗೋಡು: ಕಳೆದ ವರ್ಷ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ್ದ ಕೇರಳ ಮೂಲದ ಶಂಕಿತ ಇಸಿಸ್ ಉಗ್ರ ಮರ್ವಾನ್ ಇಸ್ಮಾಯಿಲ್ ಕೂಡ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಎರಡು ದಿನಗಳ ಹಿಂದೆ ಕೇರಳದ ಕಾಸರಗೋಡಿನಲ್ಲಿರುವ ಮರ್ವಾನ್ ಇಸ್ಮಾಯಿಲ್ ಪೋಷಕರಿಗೆ ಟೆಲಿಗ್ರಾಮ್ ಮೂಲಕ ಸಂದೇಶ ತಿಳಿಸಲಾಗಿದ್ದು, ಮರ್ವಾನ್ ಇಸ್ಮಾಯಿಲ್ ಆಫ್ಘಾನಿಸ್ತಾನ ಸೇನೆಯ ವಾಯು ದಾಳಿಯಲ್ಲಿ ಹುತಾತ್ಮನಾಗಿದ್ದಾನೆ ಎಂದು ಸಂದೇಶ ರವಾನಿಸಲಾಗಿದೆ. ಈ ಬಗ್ಗೆ ಇಂದು ಮರ್ವಾನ್ ಇಸ್ಮಾಯಿಲ್ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳೀಯ ಸಮಾಜಿಕ ಕಾರ್ಯಕರ್ತ ಬಿಸಿ ಅಬ್ದುಲ್ ರೆಹಮಾನ್ ಅವರಿಗೆ ಅಂದೇ ಸಂದೇಶ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಆಫ್ಘಾನಿಸ್ತಾನ ಮತೀಯವಾದಿಗಳಿಂದ ತುಂಬಿರುವ ತ್ಪಿಕ್ಕಾರಿಪುರ್ ನಲ್ಲಿ ಆಪ್ಘನ್ ಸೇನೆ ವಾಯುದಾಳಿ ನಡೆಸಿತ್ತು. ಈ ವೇಳೆ ಹತ್ತಾರು ಇಸಿಸ್ ಉಗ್ರರು ಸೇರಿದಂತೆ ಹಲವರು ಸಾವನ್ನಪ್ಪಿದ್ದರು. ಇದೇ ದಾಳಿಯಲ್ಲೇ ಮರ್ವಾನ್ ಇಸ್ಮಾಯಿಲ್ ಕೂಡ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಮರ್ವಾನ್ ಸಾವಿನ ಕುರಿತು ಕೇಂದ್ರ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಕಾಬೂಲ್ ನಲ್ಲಿರುವ ಭಾರತೀಯ ಹೈಕಮಿಷನ್ ಸ್ಥಳೀಯ ಅಧಿಕಾರಿಗಳ ಜತೆ ಸಂಪರ್ಕದಲ್ಲಿ ಇರುವುದಾಗಿ ತಿಳಿದುಬಂದಿದೆ.
ಕಳೆದ ವರ್ಷ ಕೇರಳದಿಂದ ಸುಮಾರು 11 ಮಂದಿ ಯುವಕರು ನಾಪತ್ತೆಯಾಗಿದ್ದರು. ಬಳಿಕ ಇವರೆಲ್ಲರೂ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಿದ್ದಾರೆ ಎಂದು ಹೇಳಲಾಗುತ್ತಿತ್ತು.
Advertisement