ಕಾಟ್ನಿ: ಆಂಬ್ಯುಲೆನ್ಸ್ ಸಿಗದೆ ಗರ್ಭಿಣಿಯೊಬ್ಬರು 20 ಕಿಲೋ ಮೀಟರ್ ನಡೆದು ಮಾರ್ಗ ಮಧ್ಯದಲ್ಲಿಯೇ ಹೆರಿಗೆಯಾಗಿ ಮಗು ಮೃತಪಟ್ಟ ಘಟನೆ ಮಧ್ಯ ಪ್ರದೇಶದ ಕಾಟ್ನಿ ಜಿಲ್ಲೆಯಲ್ಲಿ ನಡೆದಿದೆ.
ಮಧ್ಯ ಪ್ರದೇಶದ ಕಾಟ್ನಿ ಜಿಲ್ಲೆಯ ಬರ್ಮಾನಿ ಗ್ರಾಮದ ತುಂಬು ಗರ್ಭಿಣಿ ಬೀನಾ ಬರ್ಹಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆರಿಗೆ ನೋವು ಕಾಣಿಸಿಕೊಂಡಿತು ಎಂದು ಆಕೆಯ ಪತಿಯ ಜೊತೆ ನಡೆದುಕೊಂಡು ಹೋಗುತ್ತಿದ್ದಳು. ಆಂಬ್ಯುಲೆನ್ಸ್ ನ್ನು ವಿಚಾರಿಸಿದಾಗ ಅವರಿಗೆ ಸಿಕ್ಕಿರಲಿಲ್ಲ. ಕಷ್ಟಪಟ್ಟು 20 ಕಿಲೋ ಮೀಟರ್ ನಡೆದು ದಂಪತಿ ಬರ್ಹಿ ಪಟ್ಟಣವನ್ನು ತಲುಪಿದ್ದರು. ಆದರೆ ಆಸ್ಪತ್ರೆ ತಲುಪುವ ಮೊದಲೇ ಪೊಲೀಸ್ ಠಾಣೆಯೊಂದರ ಹತ್ತಿರ ಹೆಣ್ಣು ಮಗುವಿಗೆ ಬೀನಾ ಜನ್ಮ ನೀಡಿದಳು. ಮಗು ನೆಲಕ್ಕೆ ಬಿದ್ದ ಕಾರಣ ಗಾಯವಾಗಿ ಮೃತಪಟ್ಟಿದೆ ಎಂದು ಆಕೆಯ ಕುಟುಂಬಸ್ಥರು ಹೇಳಿದ್ದಾರೆ.
ಆದರೆ 7ನೇ ತಿಂಗಳಿನಲ್ಲಿ ಅವಧಿಗೆ ಮುಂಚೆ ಮಗು ಜನಿಸಿದ್ದರಿಂದ ಮಗು ಮೃತಪಟ್ಟಿದೆ, ಒಂದು ವೇಳೆ ಆಸ್ಪತ್ರೆಯಲ್ಲಿ ಕೂಡ ಮಗು ಹುಟ್ಜುತ್ತಿದ್ದರೆ ಮಗು ಬದುಕುಳಿಯುತ್ತಿರಲಿಲ್ಲ ಎನ್ನುತ್ತಾರೆ ಜಿಲ್ಲೆಯ ಮುಖ್ಯ ಆರೋಗ್ಯಾಧಿಕಾರಿ ಅಶೋಕ್ ಅವಧಿಯಾ.
ಆಂಬ್ಯುಲೆನ್ಸ್ ಕಳುಹಿಸಲಿಲ್ಲವೇಕೆ ಎಂದು ಕೇಳಿದ್ದಕ್ಕೆ, ಬರ್ಹಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆಯಿಲ್ಲ. ಗರ್ಭಿಣಿ ಮಹಿಳೆಯರಿಗಿರುವ 108 ಆಂಬ್ಯುಲೆನ್ಸ್ ಸೇವೆ ನಮ್ಮ ಅಧೀನಕ್ಕೆ ಬರುವುದಿಲ್ಲ. ಅದು ಭೋಪಾಲ್ ನಲ್ಲಿ ಸಿಗುತ್ತದೆಯಷ್ಟೆ ಎಂದು ಉತ್ತರಿಸಿದರು.