ಕೇರಳ: ಮದುವೆಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ರಾಜ್ಯ ಸರ್ಕಾರ ಮುಂದು

ಕೇರಳ ರಾಜ್ಯದಲ್ಲಿ ಮದುವೆ ಸಮಾರಂಭಗಳು ಇನ್ನು ಮುಂದೆ ಹೆಚ್ಚು ಪರಿಸರ ಸ್ನೇಹಿಯಾಗಲಿವೆ. ಶುಭ ಸಮಾರಂಭಗಳಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತಿರುವನಂತಪುರ: ಕೇರಳ ರಾಜ್ಯದಲ್ಲಿ ಮದುವೆ ಸಮಾರಂಭಗಳು ಇನ್ನು ಮುಂದೆ ಹೆಚ್ಚು ಪರಿಸರ ಸ್ನೇಹಿಯಾಗಲಿವೆ. ಶುಭಕಾರಿ ಸಂದರ್ಭಗಳನ್ನು ಹೆಚ್ಚು ಪ್ರಕೃತಿ ಸ್ನೇಹಿ ಮಾಡಲು ಹಸಿರು ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕೇರಳ ಸರ್ಕಾರದ ನಿಯಮ ಪ್ರಕಾರ, ಪ್ಲಾಸ್ಟಿಕ್ ಮತ್ತು ಇತರ ವಿಘಟಿಸಲಾಗದ ವಸ್ತುಗಳಾದ ಎಸೆಯುವ ಲೋಟಗಳು, ತಟ್ಟೆಗಳು ಮತ್ತು ಥರ್ಮೊಕೋಲ್ ನಿಂದ ಮಾಡಿದ ಅಲಂಕಾರಗಳನ್ನು ಮದುವೆ ಸಮಾರಂಭಗಳಲ್ಲಿ ಬಳಸುವುದಕ್ಕೆ ನಿಷೇಧ ಹೇರಲಾಗುತ್ತದೆ.
ಇದರ ಬದಲಾಗಿ ಜನರು ಗಾಜಿನ ಮತ್ತು ಪರಿಸರ-ಸ್ನೇಹಿ ಲೋಹಗಳಿಂದ ತಯಾರಿಸಲ್ಪಟ್ಟ ಟಂಬ್ಲರ್ ಗಳು, ಫಲಕಗಳು ಮತ್ತು ಇತರ ಪಾತ್ರೆಗಳನ್ನು ಬಳಸುವಂತೆ ಉತ್ತೇಜನ ನೀಡಲಾಗುತ್ತದೆ. ಜನರು ಸರ್ಕಾರದ ನಿಯಮವನ್ನು ಸರಿಯಾಗಿ ಪಾಲಿಸುತ್ತಾರೆಯೇ, ಇಲ್ಲವೇ ಎಂದು ಮದುವೆ ಸಭಾಂಗಣ, ಕನ್ವೆನ್ಷನ್ ಸೆಂಟರ್ , ಹೊಟೇಲ್ ಮತ್ತು ಇತರ ಸ್ಥಳಗಳಲ್ಲಿ ಮದುವೆ ಕಾರ್ಯಕ್ರಮ ನಡೆಯುವ ಕಡೆಗಳಲ್ಲಿ ತಪಾಸಣೆ ಮಾಡಲಾಗುತ್ತದೆ.  ನಿಯಮ ಉಲ್ಲಂಘಿಸಿದವರ ವಿರುದ್ಧ  ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 
 ಶುಚಿತ್ವಕ್ಕಾಗಿ ಇರುವ ರಾಜ್ಯ ನೋಡಲ್ ಏಜೆನ್ಸಿ ಶುಚಿತ್ವ ಮಿಷನ್, ಈಗಾಗಲೇ ಅಭಿಯಾನವನ್ನು ಕಣ್ಣೂರು, ಎರ್ನಾಕುಲಂ, ಕೊಲ್ಲಂ ಮತ್ತು ಆಲಪ್ಪುರದಲ್ಲಿ ಪ್ರಾಯೋಗಿಕ ಮಾದರಿಯಲ್ಲಿ ಜಾರಿಗೆ ತಂದಿದೆ.
ಶುಚಿತ್ವ ಮಿಷನ್ ನ ನಿರ್ದೇಶಕ ಸಿ.ವಿ.ಜೊಯ್, ಹಸಿರು ನಿಯಮವನ್ನು ರಾಜ್ಯ ಸರ್ಕಾರದ ಪ್ಲಾಸ್ಟಿಕ್ ಬಳಕೆ ವಿರೋಧಿ ಮತ್ತು ಗ್ರೀನ್ ಕೇರಳ  ಮಿಷನ್ ನ ಭಾಗವಾಗಿ ಆರಂಭಿಸಲಾಗಿದೆ. ಅಭಿಯಾನದ ಮುಖ್ಯ ಉದ್ದೇಶ ದಿನ ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತಗ್ಗಿಸುವುದಾಗಿದೆ. ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಲೋಟ, ತಟ್ಟೆಗಳನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ ಎಂದು ಸಿ.ವಿ.ಜೊಯ್ ಸುದ್ದಿ ಸಂಸ್ಥೆಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com