ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್
ದೇಶ
ರೈತರಿಗೆ ಸರ್ಕಾರ ಎಂದಿಗೂ ನಂಬಿಕೆ ದ್ರೋಹ ಮಾಡುವುದಿಲ್ಲ, ಶಾಂತಿ ಕಾಪಾಡಿ: ರಾಜನಾಥ ಸಿಂಗ್
ರೈತರಿಗೆ ನಂಬಿಕೆ ದ್ರೋಹ ಮಾಡುವಂತಹ ಯಾವುದೇ ಕೆಲಸವನ್ನು ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರ ಮಾಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಗುರುವಾರ...
ಮುಂಬೈ: ರೈತರಿಗೆ ನಂಬಿಕೆ ದ್ರೋಹ ಮಾಡುವಂತಹ ಯಾವುದೇ ಕೆಲಸವನ್ನು ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರ ಮಾಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಗುರುವಾರ ಹೇಳಿದ್ದಾರೆ.
ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಂಡಸೌರ್ ನಲ್ಲಿ ರೈತರ ಪ್ರತಿಭಟನೆ ಕುರಿತಂತೆ ಮಾತನಾಡಿರುವ ಅವರು, ರೈತರ ವಿಚಾರದಲ್ಲಿ ವಿರೋಧ ಪಕ್ಷಗಳು ತಮಾಷೆ ಆಟಗಳನ್ನು ಆಡುತ್ತಿದೆ. ರೈತರಿಗೆ ನಂಬಿಕೆ ದ್ರೋಹ ಮಾಡುವಂತಹ ಯಾವುದೇ ಕೆಲಸವನ್ನು ಸರ್ಕಾರ ಮಾಡುವುದಿಲ್ಲ. ರೈತರು ಪ್ರತಿಭಟನೆ ನಡೆಸುತ್ತಿರುವ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶಕ್ಕೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಹಾಯವನ್ನು ಮಾಡಲಿದೆ ಎಂದು ಹೇಳಿದ್ದಾರೆ.
ರೈತರ ಪ್ರತಿಭಟನೆ ಬಂದಾಗ ಅಲ್ಲಿ ಭದ್ರತಾ ಪಡೆಗಳ ಅಗತ್ಯವಿರುವುದಿಲ್ಲ ಎಂದು ನನಗೆ ಅನಿಸುತ್ತಿದೆ. ಆದರೆ, ಪ್ರಸ್ತುತ ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಕೆಲ ದುಷ್ಕರ್ಮಿಗಳು ಪ್ರತಿಭಟನಾಕಾರರಂತೆ ನಟಿಸಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವಂತೆ ಮಾಡುತ್ತಿದ್ದಾರೆ. ಈಗಾಗಲೇ ಸರ್ಕಾರ ತನಿಖೆಗೆ ಆದೇಶಿಸಿದ್ದು, ತನಿಖಾ ವರದಿ ಬಳಿಕವಷ್ಟೇ ನಾವು ಕ್ರಮ ಕೈಗೊಳ್ಳಲು ಸಾಧ್ಯ ಎಂದು ತಿಳಿಸಿದ್ದಾರೆ.
ಸಾಮಾನ್ಯ ಜನರು ಮತ್ತು ರೈತರ ನಂಬಿಕೆಗೆ ದ್ರೋಹ ಬಗೆಯುವಂತಹ ಕೆಲಸವನ್ನು ಎನ್ ಡಿಎ ಸರ್ಕಾರ ಎಂದಿಗೂ ಮಾಡುವುದಿಲ್ಲ. ಕೇಂದ್ರದಲ್ಲಿಯೇ ಆಗಲೀ ಅಥವಾ ಬಿಜೆಪಿ ನೇತೃತ್ವದ ಯಾವುದೇ ರಾಜ್ಯದಲ್ಲೇ ಆಗಲೀ ರೈತರ ವಿಚಾರದಲ್ಲಿ ಅತ್ಯಂತ ಸೂಕ್ಷ್ಮವಾಗಿದೆ. ರೈತರು ಮುಂದೆ ಬಂದು ಆಯಾ ರಾಜ್ಯಗಳ ಗೌರವಾನ್ವಿತ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಬೇಕೆಂದು ನಾನು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ.
ನಾನೂ ಕೂಡ ರೈತನ ಪುತ್ರನೇ. ಕೇಂದ್ರದಲ್ಲಿ ಕೃಷಿ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. 2022ರೊಳಗಾಗಿ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆಯನ್ನು ಈ ವರೆಗೂ ಯಾವುದೇ ಪ್ರಧಾನಮಂತ್ರಿಗಳೂ ನೀಡಿರಲಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ