ನವದೆಹಲಿ: ಮಂಡಸೌರ್'ಗೆ ಭೇಟಿ ನೀಡಲು ಹೋಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ತಡೆದಿದ್ದಕ್ಕೆ ಮಧ್ಯಪ್ರದೇಶ ಸರ್ಕಾರದ ವಿರುದ್ಧ ಶಿವಸೇನೆ ತೀವ್ರವಾಗಿ ಕಿಡಿಕಾರಿದೆ.
ರೈತರ ಉಗ್ರ ಹೋರಾಟದಿಂದಾಗಿ ತತ್ತರಿಸಿ ಹೋಗಿದ್ದ ಮಂಡಸೌರ್ ಗೆ ಭೇಟಿ ನೀಡಲು ರಾಹುಲ್ ಗಾಂಧಿಯವರು ತೆರಳಿದ್ದರು. ಈ ವೇಳೆ ರಾಹುಲ್ ಗಾಂಧಿಯವರನ್ನು ಅಲ್ಲಿನ ಪೊಲೀಸರು ತಡೆದು, ರೈತರನ್ನು ಭೇಟಿಯಾಗದಂತೆ ನೋಡಿಕೊಂಡಿದ್ದರು.
ಈ ಹಿನ್ನಲೆಯಲ್ಲಿ ಮಧ್ಯಪ್ರದೇಶ ಸರ್ಕಾರದ ವಿರುದ್ಧ ತನ್ನ ಮುಖಪುಟ ಸಾಮ್ನಾದಲ್ಲಿ ಕಿಡಿಕಾರಿರುವ ಶಿವಸೇನೆ, ಇದು ಪ್ರಜಾಪ್ರಭುತ್ವಕ್ಕೆ ಹಾನಿಕರವಾದ ಬೆಳವಣಿಗೆಯಾಗಿದೆ. ವಿರೋಧ ಪಕ್ಷಗಳ ನಾಯಕರು ಹಾಗೂ ಸಂತ್ರಸ್ತರ ನಡುವೆ ಗೋಡೆ ಕಟ್ಟುವುದು ಸರಿಯಲ್ಲ ಎಂದು ಹೇಳಿದೆ.
ಇದೇ ವೇಳೆ ರಾಹುಲ್ ದುರ್ಬಲ ಹಾಗೂ ಪರಿಣಾಮಕಾರಿಯಲ್ಲದ ನಾಯಕನೆಂದು ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಹಾಗೆಯೇ ಆಗಿದ್ದರೂ, ರಾಹುಲ್ ಗಾಂಧಿಯವರು ಮಂಡಸೌರ್'ಗೆ ಭೇಟಿ ನೀಡಲು ತಡೆಯಲು ಯಾವುದೇ ಕಾರಣಗಳಿಲ್ಲ. ಸರ್ಕಾರದಿಂದ ವಂಚಿತರಾದ ಹಾಗೂ ಸಂತ್ರಸ್ತ ಜನರನ್ನು ಭೇಟಿ ಮಾಡಲು ವಿರೋಧ ಪಕ್ಷಗಳಿಗೆ ಎಲ್ಲಾ ರೀತಿ ಹಕ್ಕುಗಳಿವೆ ಎಂದು ಹೇಳಿಕೊಂಡಿದೆ.