ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹರಿಕಾರ ನಿವತ್ತ ಸಿಜೆಐ ಪಿಎನ್ ಭಗವತಿ ನಿಧನ!

ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವು ಕ್ರಾಂತಿಕಾರಿ ವ್ಯವಸ್ಥೆ ಜಾರಿ ಮಾಡಿ ಹಲವು ಮಹತ್ವದ ತೀರ್ಪು ನೀಡಿದ್ದ ಮತ್ತು ಮೊದಲ ಬಾರಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಜಾರಿಗೆ ತಂದಿದ್ದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿಎನ್ ಭಗವತಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವು ಕ್ರಾಂತಿಕಾರಿ ವ್ಯವಸ್ಥೆ ಜಾರಿ ಮಾಡಿ ಹಲವು ಮಹತ್ವದ ತೀರ್ಪು ನೀಡಿದ್ದ ಮತ್ತು ಮೊದಲ ಬಾರಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಜಾರಿಗೆ ತಂದಿದ್ದ ನಿವೃತ್ತ ಮುಖ್ಯ ನ್ಯಾಯಮೂರ್ತಿ  ಪಿಎನ್ ಭಗವತಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಸುದ್ದಿ ಸಂಸ್ಥೆಯೊಂದು ವರದಿ ಮಾಡಿರುವಂತೆ ಸುಧೀರ್ಘ ಅನಾರೋಗ್ಯದಿಂದ ಬಳಲುತ್ತಿದ್ದ ಪಿಎನ್ ಭಗವತಿ (95 ವರ್ಷ) ಅವರು ದೆಹಲಿಯ ತಮ್ಮ ನಿವಾಸದಲ್ಲಿ ಗುರುವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಪತ್ನಿ  ಪ್ರಭಾವತಿ ಭಗವತಿ ಮತ್ತು ತಮ್ಮ ಹೆಣ್ಣುಮಕ್ಕಳನ್ನು ಭಗವತಿ ಅವರು ಅಗಲಿದ್ದಾರೆ. ಕುಟುಂಬ ಮೂಲಗಳು ತಿಳಿಸಿರುವಂತೆ ಜೂನ್ 17ರಂದು ಅಂದರೆ ನಾಳೆ ಭಗವತಿ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು  ತಿಳಿದುಬಂದಿದೆ.

ಭಗವತಿ ಅವರು ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ 1986ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವ್ಯವಸ್ಥೆಯನ್ನು ಪರಿಚಯಿಸಿದ್ದರು. 1921ರಲ್ಲಿ ಗುಜರಾತಿನಲ್ಲಿ ಜನಿಸಿದ ಅವರು 1973ರಲ್ಲೇ ಸುಪ್ರೀಂಕೋರ್ಟ್‌  ನ್ಯಾಯಮೂರ್ತಿಯಾಗಿ ನೇಮಕಗೊಂಡು, 1985ರ ಜುಲೈ 12ರಿಂದ 1986ರ ಡಿಸೆಂಬರ್ 20ರವರೆಗೆ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಸುಪ್ರೀಂ ನ್ಯಾಯಮೂರ್ತಿಯಾಗಿದ್ದ ವೇಳೆ ಸಾಮಾನ್ಯ ನಾಗರಿಕರು ಕೂಡಾ  ತಾನು ನೇರವಾಗಿ ಸಂಬಂಧ ಹೊಂದಿಲ್ಲದ ವಿಷಯವನ್ನು ಕೂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೆಸರಲ್ಲಿ ಸಲ್ಲಿಸಿ ನ್ಯಾಯ ಪಡೆಯುವ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಆಮೂಲಾಗ್ರ  ಬದಲಾವಣೆ ತಂದಿದ್ದರು.

ಜೊತೆಗೆ ನ್ಯಾ.ಕೃಷ್ಣ ಅಯ್ಯರ್‌ ಜೊತೆಗೂಡಿ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಚಾಲ್ತಿಗೊಳಿಸಿದ್ದು ಭಗವತಿ ಅವರ ಹೆಗ್ಗಳಿಕೆ. 1978ರಲ್ಲಿ ಮನೇಕಾ ಗಾಂಧಿ ಅವರ ಪಾಸ್‌ಪೋರ್ಟ್‌ ಮುಟ್ಟುಗೋಲು  ಹಾಕಿಕೊಂಡಿದ್ದ ಪ್ರಕರಣದಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೇಳಿ ಪಾಸ್‌ಪೋರ್ಟ್‌ ಮರಳಿಸಿದ್ದು ಅವರು ನೀಡಿದ್ದ ಪ್ರಮುಖ ತೀರ್ಪುಗಳಲ್ಲಿ ಒಂದು.

ಭಗವತಿ ವೃತ್ತಿ ಜೀವನಕ್ಕೆ ಕಪ್ಪುಚುಕ್ಕೆಯಾದ ಇಂದಿರಾಗಾಂಧಿ ತುರ್ತು ಪರಿಸ್ಥಿತಿ!
ಇದೆಲ್ಲದರ ಜೊತೆಗೆ 1976ರಲ್ಲಿ ದೇಶದಲ್ಲಿ ಅಂದಿನ ಇಂದಿರಾ ಸರ್ಕಾರ ತುರ್ತುಪರಿಸ್ಥಿತಿ ಹೇರಿದ್ದ ವೇಳೆ ನ್ಯಾ.ಭಗವತಿ ನೀಡಿದ್ದ ತೀರ್ಪು ಅವರ ವೃತ್ತಿ ಜೀವನದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಕಾಡಿತ್ತು. ತುರ್ತುಪರಿಸ್ಥಿತಿ ವೇಳೆ  ತಮ್ಮನ್ನು ಬಂಧಿಸಿದ್ದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಸರ್ಕಾರದ ಕ್ರಮವನ್ನು ಟೀಕಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಇಂದಿರಾ ಸರ್ಕಾರ ಸಲ್ಲಿಸಿದ ಮೇಲ್ಮನವಿ  ಅರ್ಜಿಯನ್ನು ನ್ಯಾ. ಭಗವತಿ ಅವರನ್ನೊಳಗೊಂಡ ನಾಲ್ವರು ಜಡ್ಜ್‌ ಗಳ ಪೀಠ ಪುರಸ್ಕರಿಸಿತ್ತು. ತುರ್ತುಪರಿಸ್ಥಿತಿ ಅವಧಿಯಲ್ಲಿ ಯಾವುದೇ ವ್ಯಕ್ತಿಯ ಮೂಲಭೂತ ಹಕ್ಕನ್ನು ಕೂಡಾ ಸರ್ಕಾರ ಬದಿಗೊತ್ತಬಹುದು ಎಂದು ಆಘಾತಕಾರಿ  ತೀರ್ಪು ನೀಡಿತ್ತು. ಈ ತೀರ್ಪು ನೀಡಿದ 30 ವರ್ಷಗಳ ಬಳಿಕ ನೀಡಿದ ಸಂದರ್ಶನವೊಂದರಲ್ಲಿ ಭಗವತಿ ಅವರು, ಅಂದಿನ ತೀರ್ಪು ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾದುದಾಗಿತ್ತು ಎಂದು ಖೇದ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com