ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳು 15,000 ರೂಪಾಯಿ ಮೊತ್ತವನ್ನು ನಗದು ರೂಪದಲ್ಲಿಯೇ ಪಾವತಿ ಮಾಡಬೇಕಿದ್ದು, ಡಿಜಿಟಲ್ ಪಾವತಿ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಪಾವತಿ ಮಾಡುವ ಮೊತ್ತವನ್ನು ಎಣಿಸಿ, ನೋಟುಗಳನ್ನು ಪರಿಶೀಲಿಸಲು ಬ್ಯಾಂಕ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ಇದರ ಹೊರತಾಗಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಠೇವಣಿ ಜಮಾ ಮಾಡಿ ಅದರ ರಸೀದಿಯನ್ನು ನಾಮಪತ್ರದೊಂದಿಗೆ ಸಲ್ಲಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.