
ಪುಣೆ: ವೇದಿಕೆ ಮೇಲೆ ನಟಿಸುತ್ತಿರುವಾಗಲೇ ಮರಾಠಿ ನಟನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಶುಕ್ರವಾರ ನಡೆದಿದೆ.
ಸಾಗರ್ ಶಾಂತಾರಮ್ ಚೌಗಲೆ (38 ವರ್ಷ) ಎಂಬ ಕಲಾವಿದ ಶುಕ್ರವಾರ ರಾತ್ರಿ ಶಾಹು ಮಹರಾಜ್ ಜೀವನಾಧಾರಿತ ನಾಟಕ ಪ್ರದರ್ಶನ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವೇದಿಕೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ನಾಟಕದಲ್ಲಿ ತಮ್ಮ ಸಂಭಾಷಣೆಯನ್ನು ಹೇಳುತ್ತಿರುವಾಗಲೇ ಅವರು ಸಾಗರ್ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾರೆ. ಇದನ್ನು ನೋಡಿದ ಸಹ ಕಲಾವಿದರು ಹಾಗೂ ಪ್ರೇಕ್ಷಕರು ಆಘಾತಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಸಾಗರ್ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.
ಮೂಲತಃ ಕೊಲ್ಲಾಪುರದವರಾದ ನಟ ಸಾಗರ್ ಶಾಂತಾರಾಮ್ ತಾಯಿ, ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅವರ ಅಂತ್ಯ ಸಂಸ್ಕಾರ ಇಂದು ಕೊಲ್ಲಾಪುರದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ,
ಕಲಾವಿದರೊಬ್ಬರು ವೇದಿಕೆಯಲ್ಲಿಯೇ ಸಾವಿಗೀಡಾದ ಘಟನೆ ಪುಣೆಯಲ್ಲಿ ನಡೆಯುತ್ತಿರುವುದು ಇದು ಎರಡನೆಯ ಬಾರಿ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಖ್ಯಾತ ಮರಾಠಿ ನೃತ್ಯ ಕಲಾವಿದೆ ಅಶ್ವಿನಿ ಎಕ್ಬೊಟೆ ಕೂಡ ಪುಣೆಯ ಭರತ ನಾಟ್ಯ ಮಂದಿರದಲ್ಲಿ ನೃತ್ಯ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು.
ಸಾಗರ್ ಮತ್ತು ಅವರ ಕುಟುಂಬ ಶಾಹುಮಹರಾಜ್ ಅವರ ಜೀವನಧಾರಿತ ನಾಟಕ ಪ್ರದರ್ಶನ ನೀಡಲು ಪುಣೆಗೆ ಆಗಮಿಸಿದ್ದರು. ಸಾಗರ್ ಶಾಂತಾರಾಮ್ ಶಾಹುಮಹಾರಾಜ್ ಅವರ ಪಾತ್ರಧಾರಿಯಾಗಿದ್ದರು ಎಂದು ತಿಳಿದುಬಂದಿದೆ.
Advertisement