
ನವದೆಹಲಿ: ಲಖನೌ ಉಗ್ರ ಎನ್ ಕೌಂಟರ್ ಮತ್ತು ಉಜ್ಜೈನ್ ರೈಲು ಸ್ಫೋಟ ಪ್ರಕರಣಗಳ ಮೂಲಕ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಭಾರತದಲ್ಲೂ ತನ್ನ ಪ್ರಾಬಲ್ಯ ವ್ಯಾಪಿಸುವತ್ತ ಹೆಜ್ಜೆ ಇಟ್ಟಿದೆ ಎಂದು ರಕ್ಷಣಾ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ನಿನ್ನೆ ಲಖನೌ ಹೊರವಲಯದ ಠಾಕೂರ್ ಗಂಜ್ ಮನೆಯೊಂದರಲ್ಲಿ ಅಡಗಿ ಕುಳಿತು ದಾಳಿ ಮಾಡುತ್ತಿದ್ದ ಉಗ್ರನನ್ನು ಸತತ ಕಾರ್ಯಾಚರಣೆ ಬಳಿಕ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ಶಂಕಿತ ಉಗ್ರ ಸೈಫುಲ್ಲಾನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಆತನ ಕೋಣೆಯನ್ನು ಜಾಲಾಡಿದ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿಗಳು ಲಭ್ಯವಾಗಿದ್ದು, ಈ ಹಿಂದೆ ನಡೆದ ಭೋಪಾಲ್ ರೈಲು ಸ್ಫೋಟದಲ್ಲೂ ಉಗರ್ರ ಕೈವಾಡದ ಕುರಿತು ಮಹತ್ವದ ಮಾಹಿತಿಗಳು ಲಭ್ಯವಾಗಿದೆ.
ಉಜ್ಜೈನ್ ರೈಲು ಸ್ಫೋಟ ಕೇವಲ ತರಬೇತಿಯಷ್ಟೇ, ಭಾರಿ ವಿಧ್ವಂಸಕ ಕೃತ್ಯಕ್ಕೆ ಉಗ್ರ ಸಂಘಟನೆ ಯೋಜನೆ
ಇನ್ನು ಉಜ್ಜೈನ್ ರೈಲು ಸ್ಫೋಟ ಪ್ರಕರಣ ಕೇವಲ ಉಗ್ರರ ತರಬೇತಿ ಕಾರ್ಯವಾಗಿದ್ದು, ಭವಿಷ್ಯದಲ್ಲಿ ಇದಕ್ಕಿಂತಲೂ ದೊಡ್ಡ ಪ್ರಮಾಣದ ಭಾರಿ ವಿಧ್ವಂಸಕ ಕೃತ್ಯಗಳನ್ನು ಭಾರತದಲ್ಲಿ ನಡೆಸಲು ಉಗ್ರ ಸಂಘಟನೆ ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು ನಿನ್ನೆಯ ಲಖನೌ ಎನ್ ಕೌಂಟರ್ ಬಳಿಕ ಉತ್ತರ ಪ್ರದೇಶ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಿದ ಪೊಲೀಸರು 6 ಮಂದಿ ಶಂಕಿತರನ್ನು ವಶಕ್ಕೆ ಪಡೆದಿದ್ದು, ಈ ಪೈಕಿ ಕಾನ್ಪುರದಲ್ಲೇ ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂತೆಯೇ ಉಜ್ಜೈನ್ ರೈಲು ಸ್ಫೋಟ ಪ್ರಕರಣದಲ್ಲಿ ಒಟ್ಟು 9 ಮಂದಿ ಶಂಕಿತ ಉಗ್ರರ ಕೈವಾಡದ ಕುರಿತು ಮಾಹಿತಿಗಳು ಲಭ್ಯವಾಗಿವೆ.
ಸುಮಾರು ತಿಂಗಳುಗಳ ಮೊದಲೇ ಉಗ್ರರು ಯೋಜನೆ ರೂಪಿಸಿಕೊಂಡು ಪ್ರತ್ಯೇಕವಾಗಿ ಉತ್ತರ ಪ್ರದೇಶದ ವಿವಿಧೆಡೆ ನೆಲೆಸಿದ್ದರಂತೆ. ಇನ್ನು ನಿನ್ನೆ ರಾತ್ರಿ ಎನ್ ಕೌಂಟರ್ ನಲ್ಲಿ ಹತನಾದ ಉಗ್ರ ಸೈಫುಲ್ಲಾ ಕೂಡ ಕೆಲವೇ ತಿಂಗಳುಗಳ ಹಿಂದಷ್ಟೇ ಲಖೌನೌಗೆ ಆಗಮಿಸಿದ್ದನಂತೆ. ಅಲ್ಲದೆ ಮಧ್ಯ ಪ್ರಾಚ್ಯದಲ್ಲಿದ್ದ ಮನೆ ಮಾಲೀಕನ ಸಂಪರ್ಕ ಸಾಧಿಸಿ ಆತನಿಂದ ಮನೆ ಬಾಡಿಗೆಗೆ ಪಡೆದಿದ್ದನಂತೆ.
ರೈಲು ಮಾರ್ಗಗಳ ನಕ್ಷೆ, ಅವುಗಳ ವೇಳಾಪಟ್ಟಿ ಪತ್ತೆ
ಇನ್ನು ಉಗ್ರನನ್ನು ಹೊಡೆದುರುಳಿಸಿದ ಲಖನೌ ಹೊರವಲಯದ ಠಾಕುರ್ ಗಂಜ್ ಪ್ರದೇಶದ ಉಗ್ರನ ನಿವಾಸದಲ್ಲಿ ಹಲವು ವಸ್ತುಗಳು ಪತ್ತೆಯಾಗಿದ್ದು, ಈ ಪೈಕಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಹಲವು ಪಿಸ್ತೂಲುಗಳು, ರಿವಾಲ್ವರ್ ಗಳು ಸುಮಾರು 650 ಸುತ್ತು ಗುಂಡುಗಳು ಪತ್ತೆಯಾಗಿದ್ದು, ಅಘಾತಕಾರಿ ಅಂಶವೆಂದರೆ ಇದೇ ರೂಮಿನಲ್ಲಿ ಭಾರತೀಯ ರೈಲುಗಳ ಮಾರ್ಗಗಳ ಕುರಿತ ನಕ್ಷೆ ಹಾಗೂ ರೈಲುಗಳ ವೇಳಾಪಟ್ಟಿ ಕೂಡ ದೊರತಿದೆ. ಇದಲ್ಲದೇ ಉಜ್ಜೈನ್ ರೈಲು ಸ್ಫೋಟ ಪ್ರಕರಣದಲ್ಲಿ ಇಸಿಸ್ ಕೈವಾಡ ಕುರಿತು ಅಧಿಕಾರಿಗಳು ಶಂಕಿಸುತ್ತಿರುವುದೂ ಕೂಡ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ನೆಲೆಯೂರುತ್ತಿರುವ ಕುರಿತು ಸ್ಪಷ್ಟ ಸಾಕ್ಷ್ಯಗಳನ್ನು ಒದಗಿಸುತ್ತಿದೆ.
Advertisement