ಲಖನೌ: ಲಖನೌನಲ್ಲಿ ಭಯೋತ್ಪಾದಕ ನಿಗ್ರಹ ಪಡೆ(ಎಟಿಎಸ್) ಗುಂಡೇಟಿಗೆ ಬಲಿಯಾದ ಶಂಕಿತ ಉಗ್ರ ಸೈಫುಲ್ಲಾ ಐಎಸ್ಐಎಸ್ ನೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಆದರೆ ಆತ ಸ್ವಯಂ ಘೋಷಿಸಿ ಉಗ್ರನಾಗಿರುವ ಸಾಧ್ಯತೆ ಇದೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ(ಕಾನೂನು ಸುವ್ಯವಸ್ಥೆ) ದಲಜೀತ್ ಜೌಧರಿ ಅವರು, ಸೈಫುಲ್ಲಾ ಐಎಸ್ಐಎಸ್ ನೊಂದಿಗೆ ನಂಟು ಹೊಂದಿರುವ ಬಗ್ಗೆ ನಮಗೆ ಇದುವರೆಗೂ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಆದರೆ ಆತನ ಮನೆಯಲ್ಲಿ ಉರ್ದು ಹಾಗೂ ಇಂಗ್ಲಿಷ್ ನಲ್ಲಿದ್ದ ಐಎಸ್ಐಎಸ್ ಕುರಿತ ಪುಸ್ತಕಗಳು ಸಿಕ್ಕಿವೆ ಎಂದು ಹೇಳಿದ್ದಾರೆ.
ಶಂಕಿತ ಉಗ್ರನ ಮನೆಯಿಂದ ಎಂಟು ಪಿಸ್ತೂಲ್, 650 ಮದ್ದು ಗುಂಡುಗಳು, 50 ಸ್ಫೋಟಕ ವಸ್ತುಗಳು ಹಾಗೂ ಬಾಂಬ್ ತಯಾರಿಸುವ ಸಾಧನಗಳು, ಲ್ಯಾಪ್ ಟಾಪ್, ಆಧಾರ್ ಕಾರ್ಡ್, ವಿದೇಶಿ ಕರೆನ್ಸಿ, ಪಾಸ್ ಪೋರ್ಟ್ ಹಾಗೂ ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಚೌಧರಿ ತಿಳಿಸಿದ್ದಾರೆ.
ಲಖನೌನ ಹೊರವಲಯದ ಠಾಕೂರ್ ಗಂಜ್ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಸೈಫುಲ್ಲಾನನ್ನು ನಿನ್ನೆ ಭಯೋತ್ಪಾದನಾ ನಿಗ್ರಹ ದಳ ಎನ್ ಕೌಂಟರ್ ಮಾಡಿತ್ತು. ಉಜ್ಜನಿ ರೈಲು ಸ್ಫೋಟ ಪ್ರಕರಣದ 9 ಮಂದಿ ಶಂಕಿತ ಉಗ್ರರ ಪೈಕಿ ಸೈಫುಲ್ಲಾ ಸಹ ಒಬ್ಬನಾಗಿದ್ದ.