ಪಂಚರಾಜ್ಯ ಚುನಾವಣೆ ಫಲಿತಾಂಶ: ರಾಜಕೀಯ ನಾಯಕರಿಂದ ವಿಶೇಷ ಪೂಜೆ
ದೇಶ
ಪಂಚರಾಜ್ಯ ಚುನಾವಣೆ ಫಲಿತಾಂಶ: ರಾಜಕೀಯ ನಾಯಕರಿಂದ ವಿಶೇಷ ಪೂಜೆ
ತೀವ್ರ ಕುತೂಹಲ ಕೆರಳಿಸಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಶನಿವಾರ ಹೊರಬೀಳಲಿದ್ದು, ಈ ಹಿನ್ನಲೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಹಲವು ರಾಜಕೀಯ ನಾಯಕರು ವಿಶೇಷ ಪೂಜೆಗಳನ್ನು...
ಲಖನೌ: ತೀವ್ರ ಕುತೂಹಲ ಕೆರಳಿಸಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಶನಿವಾರ ಹೊರಬೀಳಲಿದ್ದು, ಈ ಹಿನ್ನಲೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಹಲವು ರಾಜಕೀಯ ನಾಯಕರು ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ.
ಲಖನೌ ಕಂಟೋನ್ಮೆಂಟ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಬಿಜೆಪಿ ನಾಯಕ ರಿಟಾ ಬಹುಗುಣ ಜೋಶಿ ಅವರು ಶುಕ್ರವಾರ ಹಜ್ರತ್ಗಂಜ್ ನ ಹನುಮಾನ್ ದೇಗುಲದಲ್ಲಿ ವಿಶೇಷ ಪೂಜೆಯನ್ನು ಮಾಡಿದ್ದಾರೆ.
ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಕಾನ್ಪುರದಲ್ಲಿ ವಿಶೇಷ ಹೋಮ ಮತ್ತು ಹವನಗಳನ್ನು ನಡೆಸುವ ಮೂಲಕ ವಿಶೇಷ ಪೂಜೆಗಳನ್ನು ಸಲ್ಲಿಸಿದ್ದಾರೆ.
ವಿಶೇಷ ಪೂಜೆ ಸಂದರ್ಭದಲ್ಲಿ ಆಯಾ ಪಕ್ಷಗಳ ಕಾರ್ಯಕರ್ತರು ಪಕ್ಷದ ಧ್ವಜಗಳು, ಬ್ಯಾನರ್ ಹಾಗೂ ಪೋಸ್ಟರ್ ಗಳನ್ನು ತರುವ ಮೂಲಕ ತಮ್ಮ ಪಕ್ಷ ವಿಜಯ ಸಾಧಿಸುವಂತೆ ದೇವರ ಬಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆ ಹಾಗೂ ಆರ್ಥಿಕ ಸುಧಾರಣೆಗಳ ಅಗ್ನಿಪರೀಕ್ಷೆ ಎಂದೇ ಬಣ್ಣಿಸಲಾಗಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ.
ಇಂದು ಬೆಳಿಗ್ಗೆ 8ರಿಂದಲೇ ಎಲ್ಲಾ ಐದೂ ರಾಜ್ಯಗಳಾದ ಉತ್ತರಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ ಮತ್ತು ಮಣಿಪುರದಲ್ಲಿ ಮತ ಎಣಿಕೆ ಆರಂಭಗೊಂಡಿದೆ. ಬೆಳಗ್ಗೆ 10ಗಂಟೆ ಸುಮಾರಿಗೆ ಯಾವ ಪಕ್ಷ ಅಧಿಕಾರಕ್ಕೇರಬಹುದು ಎಂಬ ಸುಳಿವು ಲಭಿಸುವ ಹಾಗೂ ಬೆಳಿಗ್ಗೆ 11ರ ಹೊತ್ತಿಗೆ ಅಂತಿಮ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆಗಳಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ