ಉ.ಪ್ರದೇಶ ಚುನಾವಣೆ: ಉತ್ತಮ ಕಾರ್ಯಕ್ಕಾಗಿ ಜನರು ಮತ ಹಾಕಿದ್ದಾರೆ, ಭ್ರಷ್ಟಾಚಾರಕ್ಕಲ್ಲ- ಬಿಜೆಪಿ

ಉತ್ತರಪ್ರದೇಶದ ಜನತೆ ರಾಜ್ಯದ ಉತ್ತಮ ಕಾರ್ಯಕ್ಕಾಗಿ ಮತಹಾಕಿದ್ದಾರೆ. ಜಾತಿಯಾಧಾರಿತ ರಾಜಕೀಯಕ್ಕಾಗಲೀ, ಭ್ರಷ್ಟಾಚಾರಕ್ಕಾಗಲೀ ಹಾಕಿಲ್ಲ ಎಂದು ಬಿಜೆಪಿ ಶನಿವಾರ ಹೇಳಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಉತ್ತರಪ್ರದೇಶದ ಜನತೆ ರಾಜ್ಯದ ಉತ್ತಮ ಕಾರ್ಯಕ್ಕಾಗಿ ಮತಹಾಕಿದ್ದಾರೆ. ಜಾತಿಯಾಧಾರಿತ ರಾಜಕೀಯಕ್ಕಾಗಲೀ, ಭ್ರಷ್ಟಾಚಾರಕ್ಕಾಗಲೀ ಹಾಕಿಲ್ಲ ಎಂದು ಬಿಜೆಪಿ ಶನಿವಾರ ಹೇಳಿದೆ. 
ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಣೆ ಅಂತಿಮ ಹಂತ ತಲುಪಿದ್ದು, ಉತ್ತರಪ್ರದೇಶ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವ ಪ್ರಕಾಶ್ ಜವಡೇಕರ್ ಅವರು, ಇದು ನಿಜಕ್ಕೂ ಉತ್ತಮವಾದ ಬೆಳವಣಿಗೆ. ಎಲ್ಲವೂ ಇನ್ನು ಒಂದು ಗಂಟೆಯಲ್ಲಿ ಸ್ಪಷ್ಟವಾಗಲಿದೆ. ಜನರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದ ಮೇಲೆ ನಂಬಿಕೆ ಹಾಗೂ ಆತ್ಮವಿಶ್ವಾಸವನ್ನು ಈ ಮೂಲಕ ವ್ಯಕ್ತಪಡಿಸಿದ್ದಾರೆಂದು ಹೇಳಿದ್ದಾರೆ. 
ಜನರು ರಾಜ್ಯ ಅಭಿವೃದ್ಧಿಗಾಗಿ ಮತಗಳನ್ನು ಹಾಕಿದ್ದಾರೆ. ಉತ್ತಮ ಕಾರ್ಯಕ್ಕಾಗಿ ಮತಹಾಕಿದ್ದಾರೆ. ಜಾತಿ ಮತ್ತು ಧರ್ಮದ ಆಧಾರಿತ ರಾಜಕೀಯಕ್ಕಾಗಲೀ, ಭ್ರಷ್ಟಾಚಾರಕ್ಕಾಗಲಿ ಮತವನ್ನು ಹಾಕಿಲ್ಲ. ರಾಜ್ಯದಲ್ಲಿ ಮಹಿಳೆಯರು ಹಾಗೂ ಯುವ ಮತದಾರರ ಬೆಂಬಲವನ್ನು ನಾವು ಪಡೆದಿದ್ದೇವೆಂದು ಹೇಳಿದ್ದಾರೆ. 
ಬಿಜೆಪಿ ನಾಯಕ ನಳಿನ್ ಕೊಹ್ಲಿ ಅವರು ಮಾತನಾಡಿ, ರಾಜ್ಯದ ಜನತೆಗೆ ಭ್ರಷ್ಟಾಚಾರ ರಾಜಕೀಯ ಸಾಕಾಗಿ ಹೋಗಿದೆ. ರಾಜ್ಯದಲ್ಲಿ ಅಚ್ಛೇ ದಿನ ಬೇಕೆಂದು ಜನರು ಬಯಸಿದ್ದಾರೆಂದು ಹೇಳಿದ್ದಾರೆ. 
ಬಡವರು, ಯುವಕರು, ಮಹಿಳೆಯರು, ಹಿಂದುಳಿದ ಜನರು ಹಾಗೂ ರೈತರಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡುತ್ತಿರುವ ಉತ್ತಮ ಕೆಲಸಗಳು ಜನರಿಗೆ ತಲುಪಿದೆ ಎಂಬುದು ಇದರಿಂದ ತಿಳಿಯುತ್ತಿದೆ. ಜನರು ಮೋದಿಯವರ ಮೇಲಿಟ್ಟಿರುವ ನಂಬಿಕೆ ಫಲಿತಾಂಶದ ಮೂಲಕ ತಿಳಿಯುತ್ತಿದೆ. ಭ್ರಷ್ಟಾಚಾರ ಹಾಗೂ ಅಧಿಕಾರ ರಾಜಕೀಯದ ಮೇಲೆ ಜನರು ಆಸಕ್ತಿಯನ್ನು ಕಳೆದುಕೊಂಡಿದ್ದಾರೆಂದು ಕೊಹ್ಲಿ ಹೇಳಿದ್ದಾರೆ. 
ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಮಾತನಾಡಿ, ಜನರ ಕನಸನ್ನು ಪ್ರಧಾನಿ ಮೋದಿಯವರು ಇಂದು ನನಸು ಮಾಡಿದ್ದಾರೆ. ಭ್ರಷ್ಟಾಚಾರ ರಾಜಕೀಯ ಮತ್ತು ಅಪರಾಧಗಳು ಇನ್ನು ಮುಂದೆ ರಾಜ್ಯದಿಂದ ಹೊರಹೋಗುತ್ತವೆ ಎಂದಿದ್ದಾರೆ. 
ಬಡವರ ಅಭಿವೃದ್ಧಿಗಾಗಿ ಪ್ರಧಾನಮಂತ್ರಿಗಳು ಕೆಲಸ ಮಾಡಿದ್ದರು. ಅವರ ಶ್ರಮಕ್ಕೆ ಜನರು ಮುದ್ರೆ ಒತ್ತಿದ್ದಾರೆ. ದೇಶದಲ್ಲಿ ಇಂದು ಅಭಿವೃದ್ಧಿ ಹಾಗೂ ನಂಬಿಕೆಯುತ ವಾತಾವರಣ ನಿರ್ಮಾಣವಾಗುತ್ತಿದೆ. ಶೀಘ್ರದಲ್ಲಿಯೇ ಉತ್ತರಪ್ರದೇಶದಲ್ಲಿ ಸರ್ಕಾರ ರಚಿಸುತ್ತೇವೆಂದು ನಖ್ವಿ ತಿಳಿಸಿದ್ದಾರೆ. 
ಬಿಜೆಪಿ ನಾಯಕ ಯೋಗಿ ಆದಿತ್ಯಾನಾಥ್ ಮಾತನಾಡಿ, ಜನರು ಉತ್ತಮ ಕಾರ್ಯಕ್ಕಾಗಿ ಮತ ಹಾಕಿದ್ದು, ಕಾಂಗ್ರೆಸ್-ಸಮಾಜವಾದಿ ಪಕ್ಷಗಳನ್ನು ತಿರಸ್ಕರಿಸಿದ್ದಾರೆಂದು ಹೇಳಿದ್ದಾರೆ. 
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿ ಮಂತ್ರಕ್ಕೆ ಜನರು ಮತ ಹಾಕಿದ್ದಾರೆ. ಜನರಿಗಾಗಿ ಕೇಂದ್ರ ತಂದ ವಿಕಾಸ ಯೋಜನೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ರಾಜಕೀಯ ತಂತ್ರಗಳು ಹಾಗೂ ಪಕ್ಷದ ಸದಸ್ಯರು ಪಟ್ಟಂತಹ ಶ್ರಮ ಇಂದು ಪಕ್ಷ ಗೆಲವಿನತ್ತ ಸಾಗಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com