16 ವರ್ಷದ ಯುವ ಮುಸ್ಲಿಂ ಗಾಯಕಿ ವಿರುದ್ಧ ಫತ್ವಾ ಹೊರಡಿಸಿದ ಮೌಲ್ವಿಗಳು

ಭಯೋತ್ಪಾದನಾ ಕೃತ್ಯಗಳ ವಿರುದ್ಧ ಜನಜಾಗೃತಿ ಮೂಡಿಸುವ ಹಾಡುಗಳನ್ನು ಹಾಡುತ್ತಿದ್ದ 16 ವರ್ಷದ ಹರೆಯದ ಉದಯೋನ್ಮುಖ ಗಾಯಕಿ ನಹೀದ್ ಅಫ್ರಿನ್ ವಿರುದ್ಧ ಅಸ್ಸಾಮಿನ 42 ಮೌಲ್ವಿಗಳು ಫತ್ವಾ...
ಉದಯೋನ್ಮುಖ ಗಾಯಕಿ ನಹೀದ್ ಅಫ್ರಿನ್
ಉದಯೋನ್ಮುಖ ಗಾಯಕಿ ನಹೀದ್ ಅಫ್ರಿನ್
ಅಸ್ಸಾಂ: ಭಯೋತ್ಪಾದನಾ ಕೃತ್ಯಗಳ ವಿರುದ್ಧ ಜನಜಾಗೃತಿ ಮೂಡಿಸುವ ಹಾಡುಗಳನ್ನು ಹಾಡುತ್ತಿದ್ದ 16 ವರ್ಷದ ಹರೆಯದ ಉದಯೋನ್ಮುಖ ಗಾಯಕಿ ನಹೀದ್ ಅಫ್ರಿನ್ ವಿರುದ್ಧ ಅಸ್ಸಾಮಿನ 42 ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ. 
ಖಾಸಗಿ ಟಿವಿ ಚಾನೆಲ್ ವೊಂದು 2015ರಲ್ಲಿ ನಡೆಸಿದ್ದ ರಿಯಾಲಿಟಿ ಶೋನಲ್ಲಿ ಅಫ್ರಿನ್ ಮೊದಲ ರನ್ನರ್ ಅಪ್ ಆಗಿದ್ದರು. ಇಸಿಸ್ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳು ನಡೆಸುತ್ತಿರುವ ಉಗ್ರವಾದದ ವಿರುದ್ಧದ ಗೀತೆಗಳನ್ನು ನಹೀದ್ ಅಫ್ರಿನ್ ಅವರು ಇತ್ತೀಚೆಗೆ ಹಾಡಿದ್ದರು. ಈ ಹಿನ್ನಲೆಯಲ್ಲಿ ಅಫ್ರಿನ್ ಸಾರ್ವಜನಿಕ ಸಂಗೀತ ಕಾರ್ಯಕ್ರಮ ನೀಡದಂತೆ ಅಸ್ಸಾಮಿನ 42 ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆಂದು ತಿಳಿದುಬಂದಿದೆ. 
ಅಸ್ಸಾಂನ ಉದಲಿ ಸೋನಾಯ್ ಬೀಬಿ ಕಾಲೇಜಿನಲ್ಲಿ ಇದೇ ಮಾರ್ಚ್ 25ರಂದು ಅಫ್ರನ್ ಗಾಯನ ಕಾರ್ಯಕ್ರಮ ನಿಗದಿಯಾಗಿತ್ತು. ಈ ಕಾರ್ಯಕ್ರಮ ಶರಿಯಾಗೆ ವಿರುದ್ಧವಾದದು ಎಂಬ ಕಾರಣಕ್ಕೆ ಅಫ್ರಿನ್ ವಿರುದ್ಧ ಅಸ್ಸಾಂನ ಹೋಜಾಯ್ ಮತ್ತು ನಾಗಾಂನ್ ಜಿಲ್ಲೆಗಳಲ್ಲಿ ನಿನ್ನೆ ಫತ್ವಾ ಹೊರಡಿಸಲಾಗಿದೆ ಎಂದು ಹೇಳಲಾಗುತ್ತಿದೆ. 
ಮಸೀದಿ, ಈದ್ಗಾ, ಮದರಸಾಗಳು ಹತ್ತಿರುವಿರುವ ಪ್ರದೇಶದಲ್ಲಿ ರಾತ್ರಿಯಿಡೀ ಸಂಗೀತ ಕಾರ್ಯಕ್ರಮ ನಡೆಸುವುದು ಶರಿಯಾಗೆ ವಿರುದ್ಧವಾದುದು. ಇದರಿಂದ ನಮ್ಮ ಮುಂದಿನ ಪೀಳಿಗೆ ಹೊರಗಿನ ಆಕರ್ಷಣೆಗಳಿಗೆ ಒಳಗಾಗುವ ಸಾಧ್ಯತೆಗಳಿವೆ. ಒಂದು ವೇಳೆ ಕಾರ್ಯಕ್ರಮ ನಡೆಸಿದ್ದೇ ಆದರೆ, ಮುಂದಿನ ತಲೆಮಾರು ಅಲ್ಲಾಹುವಿನ ಸಿಟ್ಟಿಗೆ ಗುರಿಯಾಗುತ್ತದೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ. 
ಫತ್ವಾ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಹೀದ್ ಅಫ್ರಿನ್, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಅವರು ಈ ಬಗ್ಗೆ ನನ್ನೊಂದಿಗೆ ಮಾತುಕತೆ ನಡೆಸಿದ್ದಾರೆ. ಬೆದರಿಕೆಗಳಿಂದ ಹಿಂಜರಿಯದೆ ಕಾರ್ಯಕ್ರಮಕ್ಕೆ ಹೋಗುವಂತೆ ಧೈರ್ಯ ಹೇಳಿದ್ದಾರೆಂದು ಹೇಳಿದ್ದಾರೆ. 
ಮಗುವಿನಿಂದಲೂ ನಾನು ಹಾಡುತ್ತಲೇ ಇದ್ದೇನೆ. ಸಂಗೀತವಿಲ್ಲದೆಯೇ ನನ್ನ ಜೀವನವನ್ನು ಕಲ್ಪನೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಫತ್ವಾ ಕುರಿತ ಸುದ್ದಿ ಕೇಳಿ ಆಘಾತಗೊಂಡೆ. ಆದರೆ, ನನ್ನ ಒಳಿತನ್ನು ಬಯಸುವವರು, ನನ್ನ ಗಾಯನವನ್ನು ಮೆಚ್ಚಿದವರು ಎದೆಗುಂದದೆ ಗಾಯನವನ್ನು ಮುಂದವರೆಸುವಂತೆ ಪ್ರೇರಣೆ ನೀಡುತ್ತಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com