ಉ.ಪ್ರದೇಶ ಸಿಎಂ ಆಗಿ ಯೋಗಿ ಆದಿತ್ಯಾನಾಥ್ ನೇಮಕ ಟೀಕಿಸಿದ್ದ ನ್ಯೂಯಾರ್ಕ್ ಟೈಮ್ಸ್ ಗೆ ಭಾರತ ಖಡಕ್ ಉತ್ತರ!

ಉತ್ತರ ಪ್ರದೇಶ ರಾಜ್ಯದ ನೂತನ ಸಿಎಂ ಯೋಗಿ ಆದಿತ್ಯಾನಾಥ್ ಅವರ ಆಯ್ಕೆಯನ್ನು ಟೀಕಿಸಿದ್ದ ಖ್ಯಾತ ಆಂಗ್ಲ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಗೆ ಭಾರತ ಅದೇ ಧಾಟಿಯಲ್ಲಿ ಉತ್ತರ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಉತ್ತರ ಪ್ರದೇಶ ರಾಜ್ಯದ ನೂತನ ಸಿಎಂ ಯೋಗಿ ಆದಿತ್ಯಾನಾಥ್ ಅವರ ಆಯ್ಕೆಯನ್ನು ಟೀಕಿಸಿದ್ದ ಖ್ಯಾತ ಆಂಗ್ಲ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಗೆ ಭಾರತ ಅದೇ ಧಾಟಿಯಲ್ಲಿ ಉತ್ತರ ನೀಡಿದೆ.

ಈ ಹಿಂದೆ ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯಾನಾಥ್ ಅವರನ್ನು ನೇಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವನ್ನು ಪ್ರಶ್ನಿಸಿದ್ದ ನ್ಯೂಯಾರ್ಕ್ ಟೈಮ್ಸ್ ಈ ಬಗ್ಗೆ ತನ್ನ ಸಂಪಾದಕೀಯದಲ್ಲಿ ಟೀಕೆ  ಮಾಡಿತ್ತು. ಹಿಂದುತ್ವದ ಪ್ರಖರ ಹರಿಕಾರ ಯೋಗಿ ಆದಿತ್ಯನಾಥ್‌ ರನ್ನು ಉತ್ತರ ಪ್ರದೇಶದ ಮುಖ್ಯ ಮಂತ್ರಿಯಾಗಿ ಪ್ರಧಾನಿ ಮೋದಿ ಆಯ್ಕೆ ಮಾಡಿದ್ದು, ಇದು ನಿಜವಾಗಿಯೂ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ‘ಆಘಾತಕಾರಿ'  ಬೆಳವಣಿಗೆಯಾಗಿದೆ ಎಂದು ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಅಭಿಪ್ರಾಯಪಟ್ಟಿತ್ತು.

ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಂತೆ, ಪತ್ರಿಕೆ 2019ರ ಸಾರ್ವತ್ರಿಕ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ ಹಿಂದೂಗಳನ್ನು ಓಲೈಸುವ ಸಲುವಾಗಿ ಯೋಗಿ ಆದಿತ್ಯಾನಾಥ್ ಅವರನ್ನು ಆಯ್ಕೆ  ಮಾಡಿದ್ದಾರೆ. ಒಂದು ವೇಳೆ ಯೋಗಿ ಆದಿತ್ಯಾನಾಥ್ ಅವರು ಸಾಮಾಜಿಕ ನ್ಯಾಯ ನೀಡುವಲ್ಲಿ ವಿಫಲರಾದರೆ, ನಿಜಕ್ಕೂ ಪ್ರಧಾನಿ ಮೋದಿ ಅವರ ಕನಸಿನ ಉತ್ತರ ಪ್ರದೇಶದ ಅಲ್ಪ ಸಂಖ್ಯಾತರ ಪಾಲಿಗೆ ಪ್ರತಿದಿನವೂ ಕರಾಳ ಮತ್ತು  ದುಃಸ್ವಪ್ನವಾಗಿರಲಿದೆ ಎಂದು ಬರೆದಿತ್ತು.

ಇದಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಕೂಡ ತಿರುಗೇಟು ನೀಡಿದ್ದು, "ಎಲ್ಲ ಸಂಪಾದಕೀಯಗಳು ಅಥವಾ ಅಭಿಪ್ರಾಯಗಳು ವಸ್ತುನಿಷ್ಠವಾಗಿರಬೇಕು. ಯಾವುದೇ ದೇಶದ ಪ್ರಾಮಾಣಿಕ ಪ್ರಜಾಪ್ರಭುತ್ವದ ತೀರ್ಪಿನ ಕುರಿತು ಅನುಮಾನ  ವ್ಯಕ್ತಪಡಿಸುವ ಬುದ್ಧಿವಂತಿಕೆಯೂ ಪ್ರಶ್ನಾರ್ಥಕವಾಗಿದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗೋಪಾಲ್‌ ಬಾಗ್ಲೇ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com