ಕೆಲಸ ಹೋದ ನಿರಾಶೆ, ಟೆಕ್ಕಿ ಪತ್ನಿ ನೇಣಿಗೆ ಶರಣು: ಟ್ರಂಪ್ ವೀಸಾ ನಿಯಮಕ್ಕೆ ಬಲಿ?

ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವೀಸಾ ನೀತಿಗೆ ಭಾರತದಲ್ಲಿ ಮೊದಲ ಬಲಿಯಾಗಿದ್ದು, ಪತಿ ಕೆಲಸ ಕಳೆದುಕೊಂಡಿದ್ದರಿಂದ ತೀವ್ರ ನೊಂದ ಟೆಕ್ಕಿಯ ಪತ್ನಿಯೊಬ್ಬರು ನೇಣಿಗೆ ಶರಣಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವೀಸಾ ನೀತಿಗೆ ಬಲಿಯಾಗಿ, ಪತಿ ಕೆಲಸ ಕಳೆದುಕೊಂಡಿದ್ದರಿಂದ ತೀವ್ರ ನೊಂದ ಟೆಕ್ಕಿಯ ಪತ್ನಿಯೊಬ್ಬರು ನೇಣಿಗೆ ಶರಣಾಗಿದ್ದಾರೆ.

ಮೂಲಗಳ ಪ್ರಕಾರ ಹೈದರಾಬಾದ್ ನ ಅಲ್ಕಾಪುರ ಕಾಲೋನಿಯ ಪಪ್ಪಲಗುಡದ ನಿವಾಸಿಯಾದ ಟೆಕ್ಕಿ ಸಂಜಯ್ ಶರ್ಮಾ ಅವರ ಪತ್ನಿ 39 ವರ್ಷದ ರಶ್ಮೀ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಸಂಜಯ್ ಮತ್ತು ಅವರ ಮಕ್ಕಳು ಲ್ಯಾಪ್ ಟಾಪ್ ರಿಪೇರಿ ಮಾಡಿಸಲು ಹೊರಗೆ ತೆರಳಿದ್ದಾಗ ಮನೆಯಲ್ಲಿ ರಶ್ಮೀ ನೇಣಿಗೆ ಶರಣಾಗಿದ್ದಾರೆ.

ಕುಟುಂಬದ ಸದಸ್ಯರು ಹೇಳಿರುವಂತೆ ಟೆಕ್ಕಿ ಸಂಜಯ್ ಶರ್ಮಾ ಉತ್ತರ ಪ್ರದೇಶದ ಫರೀದಾಬಾದ್ ಮೂಲದವರಾಗಿದ್ದು, ಕಳೆದ 8 ವರ್ಷಗಳಿಂದ ಅವರು ಬ್ಯಾಂಕ್ ಆಫ್ ಅಮೆರಿಕದಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ನೂತನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೀಸಾ ನೀತಿಯಿಂದಾಗಿ ಸಂಜಯ್ ಶರ್ಮಾ ವೀಸಾ ಅವಧಿ ಮುಂದವರಿಸಲು ಅಧಿಕಾರಿಗಳು ನಿರಾಕರಿಸಿದ್ದರು. ಹೀಗಾಗಿ ಸಂಜಯ್ ಶರ್ಮಾ ಕೆಲಸ ಕಳೆದುಕೊಂಡಿದ್ದರು. ಟೆಕ್ಕಿಯಾಗಿ  ಕೆಲಸ ಮಾಡಿ ಸ್ಥಿತಿವಂತರಾಗಿದ್ದ ಸಂಜಯ್​ ಶರ್ಮಾ ಇದೀಗ, ಹೆಚ್​1 ಬಿ ವೀಸಾ ಜಾರಿಯಾದ್ದರಿಂದ ಭಾರತಕ್ಕೆ ವಾಪಸ್ ಆಗಲೇಬೇಕಾದ ಅನಿವಾರ್ಯ ಪರಿಸ್ಥಿತಿಯಿಂದಾಗಿ ಅಮೆರಿಕದಲ್ಲಿದ್ದ ಆಸ್ತಿ-ಪಾಸ್ತಿಯನ್ನು ಕಡಿಮೆ ಬೆಲೆಗೆ ಮಾರಿ ಇತ್ತೀಚೆಗಷ್ಟೇ ಅವರ ಕುಟುಂಬ ಭಾರತಕ್ಕೆ ವಾಪಸ್ಸಾಗಿತ್ತು.

ಬಳಿಕ ಹೈದರಾಬಾದ್ ನ ರಹೇಜಾ ಐಟಿ ಪಾರ್ಕ್ ನಲ್ಲಿ ಶರ್ಮಾ ಕೆಲಸಕ್ಕೆ ಸೇರಿಕೊಂಡಿದ್ದರು. ಇತ್ತ ತಮ್ಮ ಪತಿ ಕೆಲಸ ಕಳೆದುಕೊಂಡಿದ್ದರಿಂದ ನೊಂದಿದ್ದ ಪತ್ನಿ ರಶ್ಮಿಗೆ ಅಮೆರಿಕದಿಂದ ವಾಪಸ್ ಆಗುವುದು ಇಷ್ಟವಿರಲ್ಲಿಲ್ಲ. ಪತಿಯ ತೊಂದರೆ ಹಾಗೂ ಇತರೆ ಸಮಸ್ಯೆಗಳಿಂದಾಗಿ  ಮನನೊಂದು ರಶ್ಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com