ಟಿಪ್ಪು ಸುಲ್ತಾನ್ ಮಸೀದಿಯ ಶಾಹಿ ಇಮಾಮ್ ಮೌಲಾನಾ ನೂರುರ್ ರೆಹ್ಮಾನ್ ಬರ್ಕಾತಿ
ದೇಶ
ಕೆಂಪು ದೀಪ ತೆಗೆಯಲು ನಿರಾಕರಣೆ: ಶಾಹಿ ಇಮಾಮ್ ವಿರುದ್ಧ ಪ್ರಕರಣ ದಾಖಲು
ಕೇಂದ್ರ ಸರ್ಕಾರ ಸೂಚನೆ ನೀಡಿದ್ದರೂ, ಕಾರಿನ ಮೇಲಿನ ಕೆಂಪು ದೀಪ ತೆಗೆಯಲು ನಿರಾಕರಿಸುತ್ತಿರವ ಟಿಪ್ಪು ಸುಲ್ತಾನ್ ಮಸೀದಿಯ ಶಾಹಿ ಇಮಾಮ್ ಮೌಲಾನಾ ನೂರುರ್ ರೆಹ್ಮಾನ್ ಬರ್ಕಾತಿ ವಿರುದ್ಧ ಶುಕ್ರವಾರ ಪ್ರಕರಣ...
ಕೋಲ್ಕತಾ: ಕೇಂದ್ರ ಸರ್ಕಾರ ಸೂಚನೆ ನೀಡಿದ್ದರೂ, ಕಾರಿನ ಮೇಲಿನ ಕೆಂಪು ದೀಪ ತೆಗೆಯಲು ನಿರಾಕರಿಸುತ್ತಿರವ ಟಿಪ್ಪು ಸುಲ್ತಾನ್ ಮಸೀದಿಯ ಶಾಹಿ ಇಮಾಮ್ ಮೌಲಾನಾ ನೂರುರ್ ರೆಹ್ಮಾನ್ ಬರ್ಕಾತಿ ವಿರುದ್ಧ ಶುಕ್ರವಾರ ಪ್ರಕರಣ ದಾಖಲಾಗಿದೆ.
ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡುವ ಸಲುವಾಗಿ ಕೇಂದ್ರ ಸರ್ಕಾರ ನೀಡಿದ್ದ ಕೆಂಪು ದೀಪ ತೆಗೆಯುವ ಆದೇಶವನ್ನು ಇಮಾಮ್ ನಿರಾಕರಿಸಿದ್ದರು. ಅಲ್ಲದೆ, ಅಸಂಬದ್ಧವಾದ ಹೇಳಿಕೆಯನ್ನು ನೀಡಿದ್ದರು. ಈ ಹಿನ್ನಲೆಯಲ್ಲಿ ಬಿಜೆಪಿ ನಾಯಕರೊಬ್ಬರು ಇಮಾಮ್ ವಿರುದ್ಧ ಟೋಪ್ಸಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಫತ್ವಾಗಳನ್ನು ಹೊರಡಿಸುವುದರಲ್ಲಿ ಬರ್ಕಾತಿಯವರು ಹೆಸರುವಾಸಿಯಾಗಿದ್ದಾರೆ. ಕೆಂಪು ದೀಪ ತೆಗೆಯುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಕೇಂದ್ರ ವಿರುದ್ದ ಬರ್ಕಾತಿಯವರು ಈ ಹಿಂದೆ ಕಿಡಿಕಾರಿದ್ದರು.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬರ್ಕಾತಿಯವರು, ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿದ್ದೇ ಆದರೆ, ದೇಶದಲ್ಲಿ ಜಿಹಾದ್ ಹೇರುತ್ತೇವೆಂದು ಬರ್ಕಾತಿ ಬೆದರಿಕೆ ಹಾಕಿದ್ದಾರೆ.
ಈ ದೇಶವೇಕೆ ಹಿಂದೂ ರಾಷ್ಟ್ರವಾಗಬೇಕು. ಮುಸ್ಲಿಂ ರಾಷ್ಟ್ರವೇಕೆ ಆಗಬಾರದು. 25-30 ಕೋಟಿ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಭಾರತವನ್ನೇಕೆ ಪಾಕಿಸ್ತಾನಕ್ಕೆ ನೀಡಬಾರದು. ನಾವು ಪಾಕಿಸ್ತಾನದ ಪರವಾಗಿ ಹೋರಾಟ ಮಾಡುತ್ತೇವೆಂದು ಹೇಳಿದ್ದಾರೆ.
ಹಿಂದೂ ರಾಷ್ಟ್ರ ನಿಜವಾದರೆ, ದೇಶದಲ್ಲಿ ಆಜಾನ್, ಗೋಮಾಂಸ ಸೇವನೆ, ಕುರಾನ್ ಗೆ ನಿಷೇಧ ಹೇರಲಾಗುತ್ತದೆ. ಇದನ್ನು ನಾವು ಎಂದಿಗೂ ಸಹಿಸುವುದಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನೂ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಜಿಹಾದ್ ಪರಿಭಾಷೆ ಕುರಿತ ಪ್ರಶ್ನೆಗೆ ಉತ್ತರಿಸಿದ ಬರ್ಕಾತಿ, ಜಿಹಾದ್ ನಲ್ಲಿ ಎಲ್ಲವೂ ನಾಶವಾಗುತ್ತದೆ. ಅಫ್ಘಾನಿಸ್ತಾನ ಹಾಗೂ ವಿಶ್ವದ ಇತರೆಡೆ ಏನಾಗುತ್ತಿದೆಯೇ ಅದೇ ಜಿಹಾದ್. ಜಿಹಾದ್ ನ್ನು ನಾವು ಕಳೆದ 100 ವರ್ಷಗಳಿಂದಲೂ ಮುಂದುವರೆಸಿಕೊಂಡು ಬಂದಿದ್ದೇವೆಂದಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ ತಮ್ಮ ಕಾರಿನ ಮೇಲೆ ಕೆಂಪು ದೀಪ ಬಳಸದೆ ಇರುವ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ಚಿಕ್ಕವರಿದ್ದಾಗ ಮಮತಾ ಬ್ಯಾನರ್ಜಿವಯರು ಎಲ್ಲವನ್ನೂ ತಿನ್ನುತ್ತಿದ್ದರು. ಮಟನ್ ಬಿರಿಯಾನಿಯನ್ನೂ ತಿನ್ನುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ಸೌತೆಕಾಯಿ ಹಾಗೂ ಬೆಂದ ಅನ್ನವನ್ನು ತಿನ್ನುತ್ತಿದ್ದಾರೆ. ನಾವೂ ಅದನ್ನೇ ತಿನ್ನುವುದೇ... ಎಂದು ಹೇಳಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರ ಕೆಂಪು ದೀಪಕ್ಕೆ ನಿಷೇಧ ಹೇರಿರುವುದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿರುವ ಬರ್ಕಾತಿ, ಕೆಂಪು ದೀಪ ಬಳಕೆ ನಮ್ಮ ಹಕ್ಕು. ನಮ್ಮ ಹಕ್ಕನ್ನು ನಾವು ಎಂದಿಗೂ ಬಿಡುವುದಿಲ್ಲ. ನಾನು ಶಾಹಿ ಇಮಾಮ್ ಆಗಿದ್ದು, ನ್ಯಾಯಾಲಯ ಆದೇಶ ನೀಡದೆಯೇ ನಾನು ಕೆಂಪು ದೀಪವನ್ನು ತೆಗೆಯುವುದಿಲ್ಲ. ಅನೇಕ ವರ್ಷಗಳಿಂದ ನಾನು ಕೆಂಪು ದೀಪ ಬಳಸುತ್ತಿದ್ದೇನೆ. ಕೇಂದ್ರದ ಆದೇಶವನ್ನು ನಾನು ಪಾಲನೆ ಮಾಡುವುದಿಲ್ಲ. ನನಗೆ ಆದೇಶಿಸಲು ಅವರು ಯಾರು? ಬಂಗಾಳದಲ್ಲಿ ರಾಜ್ಯ ಸರ್ಕಾರದ ಆದೇಶ ಮಾತ್ರ ಜಾರಿಯಲ್ಲಿರುತ್ತದೆ. ಎಲ್ಲಾ ಶಾಹಿ ಇಮಾಮ್ ಗಳೂ ಕೆಂಪು ದೀಪವನ್ನು ಬಳಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿಗಳ ವಾಹನವೂ ಸೇರಿದಂತೆ ಎಲ್ಲಾ ಗಣ್ಯರ ವಾಹನಗಳ ಮೇಲಿನ ಕೆಂಪು ದೀಪಗಳನ್ನು ಮೇ.1ರಿಂದ ತೆರವು ಮಾಡುವಂತೆ ಆದೇಶ ನೀಡಿತ್ತು. ತುರ್ತು ಸೇವಾ ವಾಹನಗಳನ್ನು ಮಾತ್ರ ಈ ಆದೇಶದಿಂದ ಹೊರತಾಗಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ