4 ತಿಂಗಳ ಮಗುವಿಗೆ 6 ಸಲ ಹೃದಯಾಘಾತ: ಆದರೂ ಬದುಕುಳಿದ "ಚಿರಂಜೀವಿ"

ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಹೆಣ್ಣುಮಗುವೊಂದು ಬರೊಬ್ಬರಿ 6 ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದು, ಆದರೂ ಪವಾಡ ಸದೃಶ ರೀತಿಯಲ್ಲಿ ಬದುಕಿಳಿದ ಅಚ್ಚರಿಯ ಘಟನೆ ಮುಂಬೈನಲ್ಲಿ ನಡೆದಿದೆ.
ಶಸ್ತ್ರಚಿಕಿತ್ಸೆಗೊಳಗಾದ ಮಗು ಹಾಗೂ ತಾಯಿ
ಶಸ್ತ್ರಚಿಕಿತ್ಸೆಗೊಳಗಾದ ಮಗು ಹಾಗೂ ತಾಯಿ

ಮುಂಬೈ: ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಹೆಣ್ಣುಮಗುವೊಂದು ಬರೊಬ್ಬರಿ 6 ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದು, ಆದರೂ ಪವಾಡ ಸದೃಶ ರೀತಿಯಲ್ಲಿ ಬದುಕಿಳಿದ ಅಚ್ಚರಿಯ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈ ಮೂಲದ ನಿವಾಸಿಗಳಾದ ವಿಶಾಖ ಹಾಗೂ ವಿನೋದ್‌ ವಾಗ್ಮರೆ ಅವರ ಪುತ್ರಿಯಾಗಿರುವ ವಿದಿಶಾ, 6 ಬಾರಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನೇ ಗೆದ್ದು ಬಂದಿದ್ದಾಳೆ. ಮಗುವಿಗೆ 45 ದಿನವಿದ್ದಾಗ ಆಹಾರ ತಿನ್ನುವಾಗ  ವಾಂತಿ ಮಾಡಿಕೊಂಡು, ಪ್ರಜ್ಞೆ ಕಳೆದುಕೊಂಡಿತ್ತು. ಹೀಗಾಗಿ ಪೋಷಕರು ವೈದ್ಯರ ಬಳಿ ತೋರಿಸಿದಾಗ ಮಗುವಿನ ಅಪಧಮನಿ, ಅಭಿದಮನಿಯ ಕೆಲಸ ಅದಲು ಬದಲಾಗಿತ್ತು. ಹೀಗಾಗಿ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಬೇಕು ಎಂದು  ವೈದ್ಯರು ಹೇಳಿದ್ದರು.

ಅದರಂತೆ ಮಗುವನ್ನು ಮುಂಬೈನ ಬಿ ಜೆ ವಾಡಿಯಾ ಆಸ್ಪತ್ರೆಗೆ ಪೋಷಕರು ದಾಖಲಿಸಿದರು. ಬಳಿಕ ವೈದ್ಯರು ಸತತ 12 ತಾಸು ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದಾದ ಬಳಿಕ ಆ ಮಗುವಿಗೆ ಆರು ಬಾರಿ  ಹೃದಯಾಘಾತವಾಗಿದೆ. ಆದರೂ ಆ ಕಂದಮ್ಮ ಬದುಕುಳಿದಿದೆ.

'ಅಪದಮನಿಗಳಲ್ಲಿನ ಸಮಸ್ಯೆಯಿಂದ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು, ಹೀಗಾಗಿ ಮಗುವಿಗೆ 12 ಗಂಟೆಗಳ ಹೃದಯ ಶಸ್ತ್ರ ಚಿಕಿತ್ಸೆ ನಡೆಸಿದ್ದೇವೆ. ಮಗುವಿನ ಉಸಿರಾಟ ಸಹಜಸ್ಥಿತಿಗೆ ಬಂದಿದೆ. ಶಸ್ತ್ರ ಚಿಕಿತ್ಸೆ  ಬಳಿಕ ಸುಮಾರು 51 ದಿನಗಳಕಾಲ ಮಗು ಐಸಿಯುನಲ್ಲಿಡಲಾಗಿತ್ತು. ಇದೀಗ ಮಗು ಚೇತರಿಸಿಕೊಂಡಿದೆ,' ಎಂದು ಮಗುವಿನ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ ಡಾ. ಬಿಸ್ವಾ ಪಾಂಡಾ ತಿಳಿಸಿದ್ದಾರೆ. ಅಂತೆಯೇ ಮಗುವಿನ ಹೃದಯ  ಚಿಕಿತ್ಸೆಗೆ ಸುಮಾರು 5 ಲಕ್ಷ ರೂ. ವರೆಗೂ ಖರ್ಚಾಗಿದ್ದು, ದಾನಿಗಳು ನೀಡಿದ್ದ ಸುಮಾರು 25 ಸಾವಿರ ರೂಪಾಯಿಯನ್ನು ಮಗುವಿನ ಚಿಕಿತ್ಸೆಗೆ ಬಳಸಿಕೊಳ್ಳಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

'ಮಗು ಹುಟ್ಟಿದ 45ನೇ ದಿನದಿಂದಲೂ ಆಗಾಗ ಪ್ರಜ್ಞೆ ತಪ್ಪಿ, ಕೆಲ ಸಮಯದ ಬಳಿಕ ಪ್ರಜ್ಞಾವಸ್ಥೆಗೆ ಬಂದರೂ ಕೂಡಲೇ ಮತ್ತೆ ಪ್ರಜ್ಞೆ ತಪ್ಪುತ್ತಿದ್ದಳು. ಇದೀಗ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮಗು  ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲಿದೆ ಎಂದು ಮಗುವಿನ ತಾಯಿ ವಿಶಾಖ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com